ಬೆಂಗಳೂರು : ಹೋಟೆಲ್ ಗ್ರಾಹಕರಿಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಸಿಹಿ ಸುದ್ದಿ ನೀಡಿದ್ದು, ಸದ್ಯಕ್ಕೆ ಊಟ, ತಿಂಡಿ ದರ ಹೆಚ್ಚಿಸುವುದಿಲ್ಲ ಎಂದು ಸೋಮವಾರ ತಿಳಿಸಿದೆ. ಇದರಿಂದ ಸದ್ಯ ಗ್ರಾಹಕರು ನಿರಾಳರಾಗಿದ್ದಾರೆ.
ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಭೆ ನಡೆಸಿದ ಹೋಟೆಲ್ ಮಾಲೀಕರ ಸಂಘ, ಊಟ, ತಿಂಡಿ ದರ ಹೆಚ್ಚಳ ಮಾಡದಿರಲು ತೀರ್ಮಾನಿಸಿದೆ. ಈ ವಿಚಾರವಾಗಿ ಸಭೆಯ ಬಳಿಕ ಸಂಘದ ಅಧ್ಯಕ್ಷ ಪಿ.ಸಿ ರಾವ್ ಮಾಹಿತಿ ನೀಡಿದ್ದಾರೆ.
ಚುನಾವಣೆ ಮುಗಿಯುವವರೆಗೂ ದರ ಏರಿಕೆ ಇಲ್ಲ
ಸದ್ಯಕ್ಕೆ ಹೋಟೆಲ್ ಊಟ, ತಿಂಡಿ ದರ ಏರಿಕೆ ಇಲ್ಲ. ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಚುನಾವಣೆ ಮುಗಿಯುವವರೆಗೂ ಆಹಾರದ ಬೆಲೆ ಹೆಚ್ಚಳ ಮಾಡದಿರಲು ತೀರ್ಮಾನಿಸಿದ್ದೇವೆ. ಜತೆಗೆ, ಗ್ಯಾಸ್ ದರ ಇಳಿಕೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಎಷ್ಟು ಉತ್ತಮ ಗೊತ್ತಾ?
ಎಲ್ಪಿಜಿ ಸಿಲಿಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಲವು ಹೋಟೆಲ್ ಮಾಲಿಕರಿಗೆ ಭಾರೀ ಹೊಡೆತ ಬಿದ್ದಿದೆ. ಊಟ, ತಿಂಡಿ, ಕಾಫಿ, ಟೀ ದರ ತುಂಬಾ ಕಡಿಮೆ ಇದ್ದು ಅವರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ತೀರಾ ನಷ್ಟವಾಗುತ್ತಿದ್ದರೆ ಶೇ 10ರ ದರ ಹೆಚ್ಚಳ ಮಾಡುವುದಕ್ಕೆ ಒಪ್ಪಿಗೆಯನ್ನೂ ನೀಡಲಾಗಿದೆ ಎಂದು ಪಿ.ಸಿ ರಾವ್ ತಿಳಿಸಿದ್ದಾರೆ.