ಬೆಂಗಳೂರು : ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆದ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಆರೋಗ್ಯದ ಬಗ್ಗೆ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ.
ಪಂಚರತ್ನ ಯಾತ್ರೆ ಸಲುವಾಗಿ ಯಲಹಂಕ ವಿಧಾನಸಭಾ ಕ್ಷೇತ್ರದಾದ್ಯಂತ ಎಚ್.ಡಿ ಕುಮಾರಸ್ವಾಮಿ ಅವರು ರೋಡ್ ಶೋ ನಡೆಸಿದ್ದಾರೆ. ಈ ವೇಳ ಕಾರ್ಯಕರ್ತರು ಹಾಗೂ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ.
ದೇವೇಗೌಡರ ಆರೋಗ್ಯ ಮಾಮೂಲಿ ತಪಾಸಣೆ ನಡೆಯುತ್ತಿದೆ. ಯಾವುದೇ ಆತಂಕ ಬೇಡ ಎಂದಿದ್ದಾರೆ. ಅಲ್ಲದೆ, ಹಾಸನದ ಟಿಕೆಟ್ ಬಗ್ಗೆ ಅವರ ಸಮ್ಮುಖದಲ್ಲಿ ಗೊಂದಲ ನಿವಾರಣೆಯಾಗಲಿದೆ. ನಮ್ಮ ನಿರ್ಣಯ ಏನೇ ಇದ್ದರೂ ದೇವೇಗೌಡರ ನಿರ್ಧಾರವೇ ಅಂತಿಮ. ದೇವೇಗೌಡರ ಮದ್ಯಸ್ಥಿಕೆಯಿಂದ ಎಲ್ಲಾ ಗೊಂದಲಕ್ಕೆ ತೆರೆ ಬೀಳಲಿದೆ ಎಂದು ಹೇಳಿದ್ದಾರೆ.
ಬಡಾವಣೆ ಹೆಸರಲ್ಲಿ ದಬ್ಬಾಳಿಕೆ
ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಶಿವರಾಮ ಕಾಂರತ ಬಡಾವಣೆ ಹೆಸರಲ್ಲಿ ದಬ್ಬಾಳಿಕೆ ನಡೆಯುತ್ತಿದೆ. ಸ್ಥಳೀಯ ಜನತೆ ಯಲಹಂಕ ಶಾಸಕ ಮತ್ತು ಬಿಡಿಎ ಅಧ್ಯಕ್ಷ ವಿಶ್ವನಾಥ್ ಅವರ ಅಧಿಕಾರದ ದಾಹದಿಂದ ಬೇಸತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಜನ ಒಳ್ಳೆಯ ನಿರ್ಧಾರ ಮಾಡಲಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ 10ಕ್ಕೂ ಹೆಚ್ಚು ನಿಗಧಿತ ಸ್ಥಳಗಳಲ್ಲಿ 7ರಿಂದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿಗೆ ಬಟ್ಟೆಗಳ ವಿಶೇಷ ಹಾರ
ಪಂಚರತ್ನ ರಥಯಾತ್ರೆಯಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿಗೆ ನೇಕಾರರು ನೆಯ್ದಿರುವ ಬಟ್ಟೆಗಳ ವಿಶೇಷ ಹಾರ ಹಾಕಿ ಅದ್ಧೂರಿಯಾಗಿ ಬರಮಾಡಿಕೊಂಡರು. ಯಲಹಂಕ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮುನೇಗೌಡ, ಮಾಜಿ ಶಾಸಕ ಇ.ಕೃಷ್ಣಪ್ಪ, ಪಕ್ಷದ ಯಲಹಂಕ ಕ್ಷೇತ್ರದ ಅಧ್ಯಕ್ಷ ಕೃಷ್ಣಪ್ಪ ಹಾಗೂ ಮತ್ತಿತರ ಮುಖಂಡು ಉಪಸ್ಥಿತರಿದ್ದರು.