Thursday, December 19, 2024

ಶರಣ್ ಕಂಠಸಿರಿಯಲ್ಲಿ ‘ರಾಮನಾಮ’ : ಶ್ರೀರಾಮನಿಗೆ ಹಾಡು ಟ್ರಿಬ್ಯೂಟ್

ಬೆಂಗಳೂರು : ರಾಮನವಮಿ ಹಬ್ಬದ ವಿಶೇಷವಾಗಿ ​ಶ್ರೀರಾಮನಿಗೆ ಚಂದನವನದ ಅಧ್ಯಕ್ಷ ನಟ ಶರಣ್ ಹಾಡೊಂದನ್ನು ಅರ್ಪಣೆ ಮಾಡಿದ್ದಾರೆ. ಶರಣ್ ಅವರಲ್ಲಿರೋ ಗಾನ ಗಾರುಡಿಗನನ್ನು ಕಂಡು ಕನ್ನಡಿಗರ ಕಿವಿಗಳು ಇಂಪಾಗುವ ಜೊತೆ ಮನಸ್ಸು ಕೂಡ ತಂಪಾಗಿದೆ.

ಹೌದು, ಇದು ನಟ ಶರಣ್ ಹಾಡಿರೋ ಹೊಚ್ಚ ಹೊಸ ಗೀತೆ. ಸದಾ ಸಿನಿಮಾಗಳಿಗೆ ಹಾಡುವ ಶರಣ್ ಅವರು ಅದೇನಪ್ಪಾ ದಿಢೀರನೆ ಭಕ್ತಿಗೀತೆ ಹಾಡಿದ್ದಾರೆ ಅಂದ್ಕೊಂಡ್ರಾ? ಇಂದು ರಾಮನವಮಿ. ಹೀಗಾಗಿ, ಈ ವಿಶೇಷ ದಿನ ಈ ಹಾಡನ್ನು ತಮ್ಮದೇ ಯೂಟ್ಯೂಬ್ ಚಾನೆಲ್​ನಲ್ಲಿ ರಿವೀಲ್ ಮಾಡಿದ್ದಾರೆ. ಆ ಮೂಲಕ​ ಶ್ರೀರಾಮನಿಗೆ ಈ ಹಾಡನ್ನು ಅರ್ಪಣೆ ಮಾಡಿದ್ದಾರೆ.

ಗಾಯಕ, ನಿರ್ಮಾಪಕರಾಗಿ ಛಾಪು

90ರ ದಶಕದಿಂದ ಇಂದಿನವರೆಗೆ ನೂರಾರು ಸಿನಿಮಾಗಳಲ್ಲಿ ನಟಿಸಿರೋ ಶರಣ್, ಹಾಸ್ಯದಿಂದಲೇ ಎಲ್ಲರನ್ನ ನಕ್ಕು ನಲಿಸಿದ್ದಾರೆ. ತಮ್ಮ ನೂರನೇ ಸಿನಿಮಾ ಱಂಬೊ ಮೂಲಕ ನಟನಾಗಿಯೂ ಹೊಸ ಹೆಜ್ಜೆ ಇಟ್ಟಿದ್ದರು. ಸದ್ಯ ಅಧ್ಯಕ್ಷ ಸ್ಥಾನ ಪಡೆದು, ಹೀರೋಗೂ ಸೈ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಸದಾ ತಮ್ಮನ್ನ ತಾವು ಹೊಸತನಕ್ಕೆ ಒಡ್ಡಿಕೊಳ್ಳುವ ಶರಣ್, ಗಾಯಕರಾಗಿ, ನಿರ್ಮಾಪಕರಾಗಿ ಕೂಡ ಛಾಪು ಮೂಡಿಸಿದ್ದಾರೆ.

ಪತ್ನಿಯ ಮನೆ ಹಿತ್ತಲಲ್ಲಿ ಚಿತ್ರೀಕರಣ

ಈ ಹಿಂದೆ ಲತಾ ಮಂಗೇಷ್ಕರ್​ಗೆ ನಾಮ್ ಗುಮ್ ಜಾಯೇಗಾ ಅನ್ನೋ ಹಾಡನ್ನು ಟ್ರಿಬ್ಯೂಟ್ ಮಾಡಿದ್ದ ಶರಣ್, ಈ ಬಾರಿ ರಘುಕುಲ ತಿಲಕ ಅಯೋಧ್ಯೆಯ ಶ್ರೀರಾಮನ ಕುರಿತ ಹಾಡೊಂದನ್ನು ಹಾಡಿದ್ದಾರೆ. ವೇದಾಂತ ದೇಶಿಕಾ ಚಿತ್ರದ ರಘುವೀರ ಗದ್ಯಂ ಹಾಡಿಗೆ ಶರಣ್ ಹೊಸ ರೂಪ ಕೊಟ್ಟಿದ್ದಾರೆ. ಸಕಲೇಶಪುರದಲ್ಲಿರೋ ತಮ್ಮ ಪತ್ನಿಯ ಮನೆಯ ಹಿತ್ತಲಲ್ಲಿ ಇದನ್ನ ಚಿತ್ರಿಸಲಾಗಿದೆ. ಅದನ್ನ ಸ್ವತಃ ಶರಣ್ ಅವ್ರ ಪುತ್ರ ಹೃದಯ್ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಶರಣ್ ಮನೆಯಲ್ಲೇ ಸಣ್ಣ ಸ್ಟುಡಿಯೋ

ಇದನ್ನು ಧರಣಿ ಮಂಡಲ ಮಧ್ಯದೊಳಗೆ ಚಿತ್ರದ ಸಂಗೀತ ಸಂಯೋಜಕ ಬಕ್ಕೇಶ್ ಅವರು ರೆಕಾರ್ಡ್​ ಮಾಡಿಕೊಟ್ಟಿದ್ದಾರೆ. ಶರಣ್ ಮನೆಯಲ್ಲೇ ಸಣ್ಣದೊಂದು ಸ್ಟುಡಿಯೋ ಕೂಡ ಇದ್ದು, ಅದನ್ನ ಶರಣ್ ಅವ್ರು ಅಲ್ಲೇ ಹಾಡಿರೋದು ಇಂಟರೆಸ್ಟಿಂಗ್. ಅಂದಹಾಗೆ ಶರಣ್ ಈ ಹಿಂದೆ ಧರಣಿ ಮಂಡಲ ಮಧ್ಯದೊಳಗೆ ಚಿತ್ರಕ್ಕಾಗಿ ಹಾಡೊಂದನ್ನ ಹಾಡಿದ್ದರು. ಅಲ್ಲಿ ಹುಟ್ಟಿದ ಬಕ್ಕೇಶ್ ಜೊತೆಗಿನ ಸ್ನೇಹಕ್ಕೆ ಈಗ ಈ ಸಾಂಗ್ ಸಾಕ್ಷಿ ಆಗಿದೆ.

ನೋಡೋಕೆ ಸ್ವಿಟ್ಜರ್ಲೆಂಡ್ ರೀತಿಯ ಲೊಕೇಷನ್ ಇದು. ಆದರೆ, ಇದು ಶರಣ್ ಅವರ ಪತ್ನಿಯ ಮನೆಯ ಹಿತ್ತಲು ಅಂದರೆ ಯಾರೂ ನಂಬಲ್ಲ. ಅಷ್ಟು ಸೊಗಸಾಗಿದೆ ಈ ಪ್ರಕೃತಿಯ ವಿಹಂಗಮ ನೋಟ. ಇಡೀ ಕುಟುಂಬ ಆಗಾಗ ಅಲ್ಲಿ ಊಟ, ಉಪಚಾರ ಮಾಡುವಂತಹ ಕಾರ್ಯಗಳನ್ನ ಮಾಡ್ತಿರುತ್ತಂತೆ. ಇನ್ನು ಇಷ್ಟೊಂದು ಅದ್ಭುತವಾಗಿ ಹಾಡಿರೋ ಶರಣ್​ಗೆ ಇಡೀ ಕರುನಾಡು ಶರಣು ಶರಣು ಅಂತಿದೆ. ಆದ್ರೆ ಶರಣ್ ಮಾತ್ರ ಇದು ಶ್ರೀರಾಮನ ಅನುಗ್ರಹ, ಆತನೇ ಹಾಡಿಸಿಕೊಂಡಿದ್ದಾರೆ ಎಂದಿದ್ದಾರೆ.

ಒಟ್ನಲ್ಲಿ, ಕಣ್ಮನ ತಣಿಸೋ ಈ ಹಾಡು, ಕಿವಿ ಇಂಪಾಗೋದ್ರ ಜೊತೆ ಮನಸ್ಸು ಹಗುರವಾಗಲಿದೆ. ಅಷ್ಟೊಂದು ಸೊಗಸಾಗಿ ಶ್ರೀರಾಮನ ಗುಣಗಾನ ಮಾಡ್ತಾರೆ ಶರಣ್. ಅವ್ರಲ್ಲಿ ಅತ್ಯದ್ಭುತ ಗಾಯಕರಿದ್ದಾರೆ ಅನ್ನೋದನ್ನ ಈ ಹಾಡು ಸಾಬೀತು ಮಾಡಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES