ಬೆಂಗಳೂರು : ಆ ಕಡೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದರು. ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಆದ್ರೆ, ಇತ್ತ ತನ್ನದೇ ಪಕ್ಷದ ಪಿರಿಯಾಪಟ್ಟಣ ಶಾಸಕ ರೆಸಾರ್ಟ್ ಬಳಿಯೇ ಡೀಲ್ ಕುದುರಿಸಿದ್ದಾನೆ.
ಹೌದು, ಆ ಮಹಾನುಭಾಗ ಶಾಸಕ ಬೇರೆ ಯಾರು ಅಲ್ಲ. ಪಿರಿಯಾಪಟ್ಟಣ ಜೆಡಿಎಸ್ ಶಾಸಕ ಕೆ.ಮಹದೇವ್. ಪಕ್ಷದ ವರಿಷ್ಠರು, ಮಾಜಿ ಮುಖ್ಯಮಂತ್ರಿಗಳು ಇದ್ದಾಗಲೇ ಲಂಚಕ್ಕೆ ಕೈ ಚಾಚಿ ಪಕ್ಷದ ಸಿದ್ಧಾಂತಕ್ಕೇ ಧಕ್ಕೆ ತಂದಿದ್ದಾರೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಮಹದೇವ್ ಲಂಚ ಪಡೆಯುವಾಗ ಪವರ್ ಟಿವಿ ಮೆಗಾ ಬೇಟೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 24ನೇ ಶಾಸಕ. ಲಂಚ ಪಡೆದಿದ್ದಲ್ಲದೇ ಜೆಡಿಎಸ್ ಪಕ್ಷಕ್ಕೆ ಭಾರೀ ಮುಖಭಂಗ ಉಂಟುಮಾಡಿದ್ದಾರೆ.
ಓಎಫ್ಸಿ ಕೇಬಲ್ ಅಳವಡಿಕೆ ಸಂಬಂಧ ಕೆ.ಮಹದೇವ್ ಪವರ್ ಟಿವಿ ಸ್ಟಿಂಗ್ ತಂಡದ ಜೊತೆಗೆ ಮಾತುಕತೆ ನಡೆಸಿದ್ದರು. ಜೆಡಿಎಸ್ ಪಕ್ಷದ ಸಭೆ ವೇಳೆಯೇ ಶಾಸಕ ಮಹದೇವ್ ಡೀಲ್ ಕುದುರಿಸಿದ್ದಾರೆ. ಅತ್ತ ಮಾಜಿ ಸಿಎಂ ಹೆಚ್ಡಿಕೆಯಿಂದ ಸಂಘಟನೆ ಕುರಿತು ಭಾಷಣ ಮಾಡುತ್ತಿದ್ದರೆ, ಇತ್ತ ರೆಸಾರ್ಟ್ ಮತ್ತೊಂದು ಬದಿಯಲ್ಲಿ ಶಾಸಕರು ನಮ್ಮ ತಂಡದ ಜೊತೆ ಡೀಲ್ ನಲ್ಲಿ ಮಗ್ನರಾಗಿದ್ದರು.
ಮೈಸೂರಿನಿಂದ 10 ಕಿಲೋಮೀಟರ್ ದೂರದಲ್ಲಿರುವ ರೆಸಾರ್ಟ್ನಲ್ಲಿ ಡೀಲ್ ಈ ಡೀಲ್ ಮಾತುಕತೆ ನಡೆದಿತ್ತು. ಪಿರಿಯಾಪಟ್ಟಣದಲ್ಲಿ ಓಎಫ್ಸಿ ಕೇಬಲ್ ಅಳವಡಿಕೆಗೆ ಕಿಲೋಮೀಟರ್ಗೆ 5 ಲಕ್ಷ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ಚೌಕಾಶಿ ನಂತರ ಕಿಲೋಮೀಟರ್ಗೆ 4 ಲಕ್ಷಕ್ಕೆ ಶಾಸಕರು ಒಕೆ ಎಂದಿದ್ದರು. ಅಡ್ವಾನ್ಸ್ ಹಣವಾಗಿ ಒಂದೂವರೆ ಲಕ್ಷ ರೂಪಾಯಿ ಹಣವನ್ನು ಪಡೆದಿದ್ದರು. ಶಾಸಕ ಕೆ.ಮಹದೇವ್ ತನ್ನ ಗನ್ಮ್ಯಾನ್ ಮೂಲಕ ಒಂದೂವರೆ ಲಕ್ಷ ರೂಪಾಯಿ ಜೇಬಿಗಿಳಿಸಿದ್ದಾರೆ.
ಹೆಸರು: ಕೆ.ಮಹದೇವ್
ಪಕ್ಷ: ಜೆಡಿಎಸ್
ಕ್ಷೇತ್ರ: ಪಿರಿಯಾಪಟ್ಟಣ
ಜಿಲ್ಲೆ: ಮೈಸೂರು
ಸ್ಥಳ: ರೆಸಾರ್ಟ್, ಮೈಸೂರು ಸಮೀಪ
ಲಂಚ: ಒಂದೂವರೆ ಲಕ್ಷ ರೂಪಾಯಿ