ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವನೆ ದಿನಾಂಕ ಘೋಷಣೆಯಾಗಿದ್ದರೆ, ಮತ್ತೊಂಡೆದೆ ಬಳ್ಳಾರಿ ಮಹಾನಗರ ಪಾಲಿಕೆ ಚುಕ್ಕಾಣಿ ಕಾಂಗ್ರೆಸ್ ಪಕ್ಷಕ್ಕೆ ಒಲಿದಿದೆ. 21 ವರ್ಷದ ಯುವತಿ ಮೇಯರ್ ಆಗಿರುವುದು ವಿಶೇಷವಾಗಿದೆ.
ಹೌದು, ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಡಿ.ತ್ರಿವೇಣಿ ಆಯ್ಕೆ ಆಗಿದ್ದಾರೆ. ಆ ಮೂಲಕ ರಾಜ್ಯದಲ್ಲೇ ಅತಿ ಕಿರಿಯ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಉಪಮೇಯರ್ ಆಗಿ ಕಾಂಗ್ರೆಸ್ ಪಕ್ಷ ಬಿ.ಜಾನಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಳ್ಳಾರಿ ಪಾಲಿಕೆ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಮೂರು ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಲ್ಕನೇ ವಾರ್ಡ್ ನ ತ್ರಿವೇಣಿ, ಏಳನೇ ವಾರ್ಡಿನ ಉಮಾದೇವಿ ಹಾಗೂ 38ನೇ ವಾರ್ಡಿನ ಕುಬೇರ ಅವರು ಕಣದಲ್ಲಿದ್ದರು. ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಉಪ ಮೇಯರ್ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾಗಿತ್ತು.
ತ್ರಿವೇಣಿ ಪರ 28 ಮತ ಚಲಾವಣೆ
21 ವರ್ಷದ ತ್ರಿವೇಣಿ ಅವರು ವಾರ್ಡ್ ನಂಬರ್ 4ರಿಂದ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಪಾಲಿಕೆ ಎರಡನೇ ಅವಧಿಯ ಮೇಯರ್ ಆಗಿ ತ್ರಿವೇಣಿ ಆಯ್ಕೆಗೊಂಡು ಅಧಿಕಾರ ಸ್ವೀಕಾರ ಮಾಡಿದ್ದಾರೆ. 33ನೇ ವಾರ್ಡಿನ ಜಾನಕಮ್ಮ ಉಪಮೇಯರ್ ಸ್ಥಾನ ಅಲಂಕರಿಸಿದ್ದಾರೆ. ಮೇಯರ್ ಆಯ್ಕೆಗೆ ಒಟ್ಟು 44 ಮತದಾರರಿಂದ ಮತದಾನ ನಡೆದಿದ್ದು, ತ್ರಿವೇಣಿ ಪರ 28 ಮತ ಚಲಾವಣೆಯಾಗಿವೆ.
ಒಟ್ಟು 39 ವಾರ್ಡ್ ಗಳ ಪೈಕಿ ಐದು ಪಕ್ಷೇತರ ಬೆಂಬಲದೊಂದಿಗೆ ಕಾಂಗ್ರೆಸ್ 26 ಸದಸ್ಯರಿದ್ದಾರೆ. ಕಳೆದ ವರ್ಷ ಕಾಂಗ್ರೆಸ್ ಪಕ್ಷದಿಂದ ರಾಜೇಶ್ವರಿ ಸುಬ್ಬರಾಯುಡು ಮೇಯರ್ ಆಗಿ ಆಯ್ಕೆಯಾಗಿದ್ದರು. ಅವಧಿ ಮುಗಿದ ಹಿನ್ನೆಲೆ ಈಗ ಹೊಸ ಮೇಯರ್ ಆಯ್ಕೆಗೆ ಚುನಾವಣೆ ನಡೆದಿದೆ.
ಅಮ್ಮ-ಮಗಳು ಇಬ್ಬರೂ ಮೇಯರ್
ಮೇಯರ್ ಆಗಿ ಆಯ್ಕೆಯಾದ ತ್ರಿವೇಣಿ ಅವರ ತಾಯಿ ಸವಿತಾ ಬಾಯಿ ಸಹ, ಕಳೆದ ಬಾರಿ ಮೇಯರ್ ಆಗಿದ್ದರು. ಇವರು ಎಸ್ಸಿ ಬಲಗೈ ಸಮುದಾಯದ ಮುಖಂಡ ಕಾಕರ್ಲ ತೋಟ ಸೂರಿ ಅವರ ಮಗಳು. ಇನ್ನೂ ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯಾಗಿದ್ದಾರೆ.