ಸಚಿನ್ ಎ ಬಿಲಿಯನ್ ಡ್ರೀಮ್ಸ್, MS ಧೋನಿ – ಎ ಅನ್ ಟೋಲ್ಡ್ ಸ್ಟೋರಿ, ಮೇರಿ ಕೋಮ್, ಭಾಗ್ ಮಿಲ್ಕಾ ಭಾಗ್, ದಂಗಲ್ ಇವೆಲ್ಲಾ ಬಾಲಿವುಡ್ ಅಂಗಳದಲ್ಲಿ ಧೂಳೆಬ್ಬಿ ಕ್ರಿಡಾಪಟುಗಳ ಜೀವನ ಕಥನಗಳು. ಕೇವಲ ಗಾಸಿಪ್ಗಳಿಂದಲೇ ಸುದ್ದಿಯಾಗುತ್ತಿದ್ದ ಚಿತ್ರರಂಗ ಹಾಗೂ ಕ್ರೀಡಾ ಜಗತ್ತು ಬಯೋಪಿಕ್ಗಳ ಮೂಲಕ ಪ್ರೇಕ್ಷಕರನ್ನು ರಂಜಿಸ್ತಾ ಇವೆ. ಇದೀಗ ಈ ಸಾಲಿಗೆ ಸೇರಲು ಹೊಸ ಚಿತ್ರವೊಂದು ಸಜ್ಜಾಗಿದೆ.
ಯೆಸ್..! ಒಂದರ ಹಿಂದೊಂದರಂತೆ ಕ್ರೀಡಾಪಟುಗಳ ಜೀವನಾಧಾರಿತ ಸಿನಿಮಾಗಳು ಯಶಸ್ಸು ಕಾಣ್ತಾ ಇದ್ದಂತೆ, ಸೈನಾ ನೆಹ್ವಾಲ್ ಬದುಕನ್ನ ಆಧರಿಸಿದ ಚಿತ್ರವೊಂದು ಸೆಟ್ಟೇರಿದೆ. ಬ್ಯಾಡ್ಮಿಂಟನ್ ಅಂಗಳದಲ್ಲಿ ವಿಶಿಷ್ಠ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿರುವ ಸೈನಾ ಜೀವನ ತೆರೆ ಮೇಲೆ ಬರಲು ಸಜ್ಜಾಗಿದೆ. ಚಿತ್ರದಲ್ಲಿ ಸೈನಾ ಪಾತ್ರದಲ್ಲಿ ಪರಿಣಿತಿ ಚೋಪ್ರಾ ಕಾಣಿಸಿಕೊಳ್ಳಲಿದ್ದು, ಪಾತ್ರಕ್ಕಾಗಿ ವರ್ಕೌಟ್ ಆರಂಭಿಸಿದ್ದಾರೆ.
ಈಗಾಗಲೇ ಪಾತ್ರಕ್ಕಾಗಿ ಪರಿಣಿತಿ ಚೋಪ್ರಾ ಬ್ಯಾಡ್ಮಿಂಟನ್ ಅಂಗಳದಲ್ಲಿ ಬೆವರು ಹರಿಸ್ತಾ ಇದ್ದಾರೆ. ಬ್ಯಾಡ್ಮಿಂಟನ್ ಪಾತ್ರಧಾರಿಯಾಗಿ ಮಿಂಚಲು ಅಭ್ಯಾಸ ನಡೆಸ್ತಾ ಇರುವ ಚಿತ್ರವೊಂದನ್ನ ಪರಿಣಿತಿ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಈ ಪೋಟೋ ಇದೀಗ ಸಖತ್ ವೈರಲ್ ಆಗ್ತಿದೆ. ಇಷ್ಟೇಅಲ್ಲ…ಈ ಚಿತ್ರವನ್ನ ಸ್ವತಃ ಸೈನಾ ನೆಹ್ವಾಲ್ ಕೂಡ ಶೇರ್ ಮಾಡಿದ್ದು, ಚಿತ್ರ ತಂಡಕ್ಕೆ ಶುಭಾಶಯ ಕೋರಿದ್ದಾರೆ.
ಅಮೂಲ್ ಗುಪ್ತ್ ನಿರ್ದೇಶನದ ಈ ಚಿತ್ರ 2018ರ ಸಪ್ಟೆಂಬರ್ನಲ್ಲೇ ಸೆಟ್ಟಿರೀತ್ತು. ಎಲ್ಲಾ ಅಂದೂಕೊಂಡಂತೆ ಆಗಿದ್ರೆ, ಸೈನಾ ನೆಹ್ವಾಲ್ ಪಾತ್ರದಲ್ಲಿ ಶ್ರದ್ಧಾ ಕಪೂರ್ ಕಾಣಿಸಿಕೊಳ್ಳಬೇಕಿತ್ತು. ಚಿತ್ರದ ಮೊದಲ ಪೋಟೋಶೂಟ್ನಲ್ಲಿಯೂ ಶ್ರದ್ಧಾ ಕಪೂರ್ ಕಾಣಿಸಿಕೊಂಡಿದ್ರು. ಆದ್ರೆ, ಕಾರಣಾಂತರಗಳಿಂದ ಈ ಚಿತ್ರದ ಶೂಟಿಂಗ್ ನಿಂತಿತ್ತು. ಇದೀಗ ಚಿತ್ರದ ಶೂಟಿಂಗ್ ಪುನಾರಂಭವಾಗಿದೆ. ಆದ್ರೆ, ಸ್ಟಾರ್ ಶೆಟ್ಲರ್ ಪಾತ್ರದಲ್ಲಿ ಪರಿಣಿತಿ ಚೋಪ್ರಾ ಕಾಣಿಸಿಕೊಳ್ಳಲಿದ್ದಾರೆ.
ಬಾಲಿವುಡ್ ಅಂಗಳದಲ್ಲಿ ಈಗಾಗಲೇ ತೆರೆ ಕಂಡಿರುವ ಬಯೋಪಿಕ್ಗಳು ಭರ್ಜರಿ ಯಶಸ್ಸು ಕಂಡಿವೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜೀವನಾಧಾರಿತ ಸಚಿನ್ ಎ ಬಿಲಿಯನ್ ಡ್ರೀಮ್ಸ್ ಹಾಗೂ ಟೀಮ್ಇಂಡಿಯಾದ ಮಿಸ್ಟರ್ ಕೂಲ್ ಎಮ್ಎಸ್ ಧೋನಿ ಜೀವನಾಧಾರಿತ MS ಧೋನಿ ದ ಅನ್ಟೋಲ್ಡ್ ಸ್ಟೋರಿ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡಿದ್ವು.
ಕೇವಲ.. ಕ್ರಿಕೆಟ್ ಆಟಗಾರರನ್ನ ಆಧರಿಸಿದ ಚಿತ್ರಗಳು ಮಾತ್ರವಲ್ಲ… ಭಾರತದ ಹೆಮ್ಮೆಯ ರನ್ನರ್ ಮಿಲ್ಖಾ ಸಿಂಗ್, ಮಣಿಪುರದ ಗಟ್ಟಿಗಿತ್ತಿ ಮೇರಿ ಕೋಮ್ ಚಿತ್ರಗಳು ಭರ್ಜರಿ ಯಶಸ್ಸು ಕಂಡಿವೆ. ಅದರಲ್ಲೂ ಮೇರಿ ಕೂಮ್ ಪಾತ್ರದಾರಿಯಾಗಿ ಬಣ್ಣ ಹಚ್ಚಿದ್ದ ಪ್ರಿಯಾಂಕ ಚೋಪ್ರಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ರು.
ಇದೀಗ ವಿಶ್ವದ ಮಾಜಿ ನಂಬರ್ ಒನ್ ಶಟ್ಲರ್ ಪಾತ್ರದಲ್ಲಿ ಪ್ರಿಯಾಂಕ ಚೋಪ್ರಾರ ತಂಗಿ ಪರಿಣಿತಿ ಬಣ್ಣ ಹಚ್ಚಲಿದ್ದಾರೆ. ಸ್ಪೋರ್ಟ್ಸ್ ಥೀಮ್ ನಲ್ಲಿ ಬಾಲಿವುಡ್ ನಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ವೈಯಕ್ತಿಕ ಮಿತಿ ಮತ್ತು ಸನ್ನಿವೇಶಗಳನ್ನ ಮೀರಿ ರಾಷ್ಟ್ರಕ್ಕಾಗಿ ಸಾಧಿಸಿದ ಕ್ರೀಡಾಪಟುಗಳ ಬದುಕು ನಿಜಕ್ಕೂ ರೋಮಾಂಚನಕಾರಿಯಾಗಿರುತ್ತೆ. ಹೀಗಾಗಿಯೇ, ಹತ್ತು ಹಲವು ದಾಖಲೆಗಳು, ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡ ದಿಗ್ಗಜರ ಸಾಧನೆಯ ಹಿಂದಿನ ಹಾದಿಯನ್ನ ನೋಡಲು ಅಭಿಮಾನಿಗಳ ಹೆಚ್ಚು ನಿರೀಕ್ಷೆಯಿಂದಲೇ ಕಾಯ್ತಾ ಇರ್ತಾರೆ.
ಒಟ್ಟಿನಲ್ಲಿ, ಒಲಂಪಿಕ್ನಲ್ಲಿ ಭಾರತವನ್ನ 3 ಬಾರಿ ಪ್ರತಿನಿಧಿಸಿದ ವಿಶ್ವಮಟ್ಟದಲ್ಲಿ ಭಾರತಕ್ಕೆ ಕೀರ್ತಿ ತಂದ ಸೈನಾ ನೆಹ್ವಾಲ್ ಸಾಹಸಗಾಥೆ ಶೀಘ್ರದಲ್ಲೇ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಸೈನಾ ಜೀವನದ ಕಹಾನಿಯನ್ನ ತಿಳಿಯಲು ಅಭಿಮಾನಿಗಳೂ ಉತ್ಸುಕರಾಗಿದ್ದಾರೆ. ಅಭಿಮಾನಿಗಳ ಅಪಾರ ನಿರೀಕ್ಷೆಯನ್ನ ಚಿತ್ರತಂಡ ಹೇಗೆ ಪೂರೈಸಲಿದೆ ಅನ್ನೋದನ್ನ ಕಾದು ನೋಡಬೇಕಿದೆ.