ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಯಾವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ. ಇದೀಗ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಮುಂದಿನ ಸಿಎಂ ಯಾರು? ಎಂಬ ಚರ್ಚೆ ಶುರುವಾಗಿದೆ.
ಹೌದು, ಒಂದೆಡೆ ಡಿಕೆಶಿ ನನಗೆ ಒಮ್ಮೆ ಅವಕಾಶ ಕೊಡಿ ಎಂದರೆ, ಮತ್ತೊಂದು ಕಡೆ ಸಿದ್ದರಾಮಯ್ಯ ಕೂಡ ಸಿಎಂ ಸ್ಥಾನದ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ಕಂಡ ಬಿಜೆಪಿ ನಾಯಕರು ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸುತ್ತಿದ್ದಾರೆ ಎಂದು ಲೇವಡಿ ಮಾಡುತ್ತಿದ್ದಾರೆ.
ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ವರುಣ ಕ್ಷೇತ್ರದಿಂದ ಗೆದ್ದಾಗಲೇ ನಾನು ಸಿಎಂ ಆಗಿದ್ದು ಎಂದು ಹೇಳಿದ್ದಾರೆ.
ಹುಟ್ಟೂರುನಲ್ಲಿ ನನ್ನ ಕೊನೆ ಚುನಾವಣೆ
ಯಾವುದೇ ಒಂದು ಕ್ಷೇತ್ರ ಲಕ್ಕಿ, ಅನ್‌ಲಕ್ಕಿ ಅಂತ ಅಲ್ಲ. ನನಗೆ ಅದರ ಮೇಲೆ ನಂಬಿಕೆಯೂ ಇಲ್ಲ. ವರುಣ ಕ್ಷೇತ್ರವೇ ನನ್ನ ಹುಟ್ಟೂರು. ವರುಣ ಹೋಬಳಿ ಕಾರಣಕ್ಕೆ ವರುಣ ಕ್ಷೇತ್ರ ಅಂತ ಕರೆಯುತ್ತಿದ್ದಾರೆ. ನನ್ನ ಕೊನೆ ಚುನಾವಣೆ ಹುಟ್ಟೂರುನಲ್ಲಿ ಆಗಬೇಕೆಂಬ ಆಸೆ ನನ್ನದು ಎನ್ನುವ ಮೂಲಕ ಪರೋಕ್ಷವಾಗಿ ನಾನೇ ಮುಂದಿನ ಸಿಎಂ ಎನ್ನುವ ಸುಳಿವು ಕೊಟ್ಟಿದ್ದಾರೆ.
ಕೋಲಾರದಲ್ಲೂ ನಿಲ್ಲುವೆ
ವರುಣ ಕ್ಷೇತ್ರದ ಜೊತೆ ನಾನು ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಕೋಲಾರ ಕ್ಷೇತ್ರದ ಜನರಿಂದ ಹೆಚ್ಚು ಒತ್ತಡ ಬರುತ್ತಿದೆ. ಪುತ್ರ ಯತೀಂದ್ರನೇ ನಾನು ಸ್ಪರ್ಧೆ ಮಾಡಲ್ಲ ಅಂದಿದ್ದಾರೆ. ಅದರ ಬಗ್ಗೆ ಹೆಚ್ಚಿನ ಚರ್ಚೆ ಬೇಡ ಎಂದು ಹೇಳಿದ್ದಾರೆ. ಆ ಮೂಲಕ ಈ ಬಾರಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಸ್ಪಷ್ಟಯನ್ನೂ ಕೊಟ್ಟಿದ್ದಾರೆ.