ಬೆಂಗಳೂರು : ತಾಯಿಗಾಗಿ ಮಗ ಮೈಸೂರು ಅರಮನೆಯನ್ನು ಬೆಂಗಳೂರಲ್ಲಿ ನಿರ್ಮಿಸಿ, ಅಮ್ಮನ ಆಸೆಯನ್ನು ಈಡೇರಿಸಿದ್ದಾರೆ.
ದಸರಾ ಎಂದೊಡನೆ ನೆನಪಾಗುವುದು ಮೈಸೂರು, ಅಲ್ಲಿನ ಅರಮನೆ, ಅಂಬಾರಿ, ದಸರಾ ಬೊಂಬೆಗಳು. ಈ ವೈಭವನ್ನು ತಾಯಿಗಾಗಿ ಮಗ ಬೆಂಗಳೂರಲ್ಲಿ ಸೃಷ್ಠಿಸಿದ್ದಾರೆ.
ತ್ರಿಪುರ ಸಂಪತ್ ಎಂಬುವವರು ಅನೇಕ ವರ್ಷಗಳಿಂದ ಮನೆಯಲ್ಲಿ ಬೊಂಬೆಗಳನ್ನು ಕೂರಿಸಿ ದಸರಾ ಆಚರಿಸುತ್ತಿದ್ದಾರೆ. ದಸರಾ ಬೊಂಬೆಗಳ ಜೊತೆಗೆ ಅರಮನೆ ಮಾದರಿಯನ್ನೂ ಕೂರಿಸಬೇಕೆಂಬುದು ಅವರ ಬಯಕೆಯಾಗಿತ್ತು. ಹಾಗಾಗಿ ಪುತ್ರ ವಸಂತ್‍ಕುಮಾರ್ ಹೊರಗಿನಿಂದ ತಂದು ಕೂರಿಸುವುದಕ್ಕಿಂತ ತಾನೇ ನಿರ್ಮಿಸುತ್ತೇನೆಂದು ಮರದಿಂದ ಅರಮನೆ ಮಾದರಿಯನ್ನು ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಸಂತ್ ಪತ್ನಿ ನಂದಿನಿ, ಅರಮನೆ ನಿರ್ಮಾಣಕ್ಕೆ ತನ್ನ ಪತಿ 8 ತಿಂಗಳು ತೆಗೆದುಕೊಂಡಿದ್ದಾರೆ. ರಾತ್ರಿ ಕೆಲಸದಿಂದ ಬಂದು ಅರಮನೆ ನಿರ್ಮಾಣದ ಕೆಲಸದಲ್ಲಿ ನಿರತರಾಗುತ್ತಿದ್ದರು. ಮೈಸೂರು ಅರಮನೆಯಂತೆಯೇ ಪೆಯಿಂಟಿಂಗ್ ಮಾಡಿ ಲೈಟ್ಸ್ ಹಾಕಿದ್ದಾರೆ ಎಂದಿದ್ದಾರೆ. ತಾಯಿಗಾಗಿ ಅರಮನೆ ಮಾದರಿ ನಿರ್ಮಿಸಿದ ವಸಂತ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.