Sunday, November 24, 2024

14 ವರ್ಷದಲ್ಲಿ ಒಂದೇ ಕುಟುಂಬದ 6 ಮಂದಿಯನ್ನು ಕೊಲೆ ಮಾಡಿದ್ದ ಹಂತಕಿ ಅಂದರ್..!

ತಿರುವನಂತಪುರಂ : ಕೇರಳದ ಕೊಜ್ಜಿಕೊಡೆ ಜಿಲ್ಲೆಯಲ್ಲಿ ನಡೆದಿದ್ದ ಸರಣಿ ಸಾವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಜೂಲಿ ಎಂಬಾಕೆ ಆಸ್ತಿಗಾಗಿ ಒಂದೇ ಕುಟುಂಬದ 6 ಮಂದಿಯನ್ನು ಕೊಲೆ ಮಾಡಿದ್ದಾಳೆಂಬುದು ಬಯಲಾಗಿದೆ. ಹಂತಕಿ ಜೂಲಿ ಮತ್ತು ಆಕೆಯ 2ನೇ ಪತಿ ಶಾಜು ಹಾಗೂ ಅವರಿಗೆ ಸೈನೆಡ್ ಪೂರೈಸುತ್ತಿದ್ದ ಪ್ರಜಿಕುಮಾರ್, ಎಂಎಸ್ ಮ್ಯಾಥ್ಯು ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
2002 ರಿಂದ 2016ರ 4 ವರ್ಷದ ಅವಧಿಯಲ್ಲಿ ಜೂಲಿ ಎಂಬಾಕೆ ವ್ಯವಸ್ಥಿತ ಸಂಚು ರೂಪಿಸಿ ಸರಣಿ ಕೊಲೆ ಮಾಡಿದ್ದಳು. ಕ್ಯಾಥೊಲಿಕ್ ಕುಟುಂಬದ 6 ಮಂದಿಯನ್ನು ಸಹಜ ಸಾವು ಎಂದು ಬಿಂಬಿಸುವಂತೆ ಹತ್ಯೆಗೈದಿದ್ದಳು. 2002ರಲ್ಲಿ ನಿವೃತ್ತ ಶಿಕ್ಷಕಿ ಅಣ್ಣಮ್ಮ ಥಾಮಸ್ (57) ಮೃತಪಟ್ಟಿದ್ದರು. 2008ರಲ್ಲಿ ಅವರ ಪತಿ ಟಾಮ್ ಥಾಮಸ್ (66) ಸಾವನ್ನಪ್ಪಿದ್ದರು. ಆಗ ಅವರಿಬ್ಬರ ಸಾವು ಕೂಡ ಸಹಜ ಸಾವೆಂದೇ ಭಾವಿಸಲಾಗಿತ್ತು. 2011ರಲ್ಲಿ ಪುತ್ರ ಈ ದಂಪತಿ ಪುತ್ರ ರಾಯ್ ಥಾಮಸ್ (40) ಮೃತರಾದಾಗ ಅದು ಸಹಜ ಸಾವಲ್ಲ, ವಿಷ ಉಣಿಸಿ ಸಾಯಿಸಿರುವುದು ಪತ್ತೆಯಾಗಿತ್ತು. ಈ ಸಾವುಗಳ ಬಳಿಕ 2014ರಲ್ಲಿ ಅಣ್ಣಮ್ಮರ ಸಹೋದರ ಮ್ಯಾಥ್ಯೂ ಮಂಜಡಿಯಿಲ್ (67) ಸಾವನ್ನಪ್ಪಿದ್ದರು.
2016ರಲ್ಲಿ ಇದೇ ಕುಟುಂಬದ ಸಂಬಂಧಿ ಸಿಲಿಯ 2 ವರ್ಷದ ಕಂದಮ್ಮ ಅಲ್ಫೋನಾ, ಕೆಲವೇ ತಿಂಗಳಲ್ಲಿ ಸಿಲಿ (27) ಮೃತಪಟ್ಟಿದ್ದರು. ಬಳಿಕ ಸಿಲಿ ಪತಿಯನ್ನು ಜೂಲಿ ಮದುವೆಯಾಗಿ ಆಸ್ತಿ ತಮಗೆ ಸೇರಬೇಕೆಂದು ಕಾನೂನು ಮೊರೆ ಹೋಗಿದ್ದಳು. ಆಗ ಟಾಮ್ ಥಾಮಸ್ ಕಿರಿಯ ಪುತ್ರನ ಮಗ ಮೆಜೊ ಆಕ್ಷೇಪಣೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೆ ಸರಣಿ ಸಾವಿನ ತನಿಖೆಗೆ ಆಗ್ರಹಿಸಿದ್ದರು.
ತನಿಖೆ ವೇಳೆ ಜೂಲಿ 6 ಮಂದಿಯ ಸಾವಿನ ಸಂದರ್ಭದಲ್ಲೂ ಸ್ಥಳದಲ್ಲಿದ್ದುದು, ಆಕೆ ಮತ್ತು ಆಕೆಯ 2ನೇ ಪತಿ ಶಾಜುನನ್ನು ಪೊಲೀಸರು 8 ಬಾರಿ ವಿಚಾರಣೆ ನಡೆಸಲಾಗಿ, ಆ 8 ಭಾರಿಯೂ ಇಬ್ಬರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಅಷ್ಟೇ ಅಲ್ಲದೆ ಅವರಿಬ್ಬರು ನಿರಂತರ ಫೋನ್ ಸಂಪರ್ಕದಲ್ಲಿದ್ದುದು ತಿಳಿದಿದೆ. ಮೃತದೇಹಗಳನ್ನು ಹೊರತೆಗೆದು ಪರೀಕ್ಷೆ ನಡೆಸಿದಾಗ ದೇಹದಲ್ಲಿ ವಿಷ ಇರುವುದು ಕನ್ಫರ್ಮ್​ ಆಗಿದ್ದು, ಜೂಲಿ ಸೈನೆಡ್ ನೀಡಿ ಕೊಲೆ ಮಾಡಿರುವುದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES