ಬೆಂಗಳೂರು : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕ್ಷೇತ್ರ ಪರದಾಟ ಸಂಬಂಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ತುದಿ ಬುಡ ಇಲ್ಲದ ಬಸ್ ಪ್ರಯಾಣ ಆರಂಭಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿದ್ದರಾಮಯ್ಯ ಚಾಮುಂಡೇಶ್ವರಿಯಿಣದ ಬದಾಮಿ, ಬಾದಾಮಿಯಿಂದ ಕೋಲಾರ, ಕೋಲಾರದಿಂದ ವರುಣಗೆ ಜಂಪ್ ಆಗುತ್ತಿದ್ದಾರೆ. ಸಿದ್ದರಾಮಯ್ಯಗೆ ದಿಕ್ಕೇ ತೋಚದ ಹಾಗೆ ಆಗಿದೆ ಎಂದು ಕುಟುಕಿದ್ದಾರೆ.
ಸಿದ್ದರಾಮಯ್ಯ ಆರಂಭದಲ್ಲಿ ಹೈಕಮಾಂಡ್ ಹೇಳಿದ ಕಡೆ ನಿಲ್ಲುತ್ತೇನೆ ಅಂದಿದ್ದರು. ಬಳಿಕ ಕುಟುಂಬದವರು ಹೇಳಿದ ಕಡೆ ನಿಲ್ಲುತ್ತೇನೆ ಎಂದು ಹೇಳಿದರು. ಬಸ್ ಯಾತ್ರೆ ಯಾವಾಗ ನಿಲ್ತಿರಿ? ಯಾವ ಕ್ಷೇತ್ರ ಆಯ್ಕೆ ಮಾಡುತ್ತೀರಿ? ನಿಮ್ಮ ತೀರ್ಮಾನ ಯಾವಾಗ ಹೇಳ್ತೀರಿ? ಎಂದು ಸಿದ್ದರಾಮಯ್ಯ ಗೆ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ನಾನು ಹಿಂದೆ ಹೇಳಿದ್ದೇನೆ. ಅವರು ಯಾವುದೇ ಕಾರಣಕ್ಕೂ ಬಾದಾಮಿಯಲ್ಲಿ ನಿಲ್ಲಲ್ಲ ಅಂತ ಹೇಳಿದ್ದೆ. ಕೋಲಾರದಲ್ಲೂ ನಿಲ್ಲಲ್ಲ ಅಂತ ಹೇಳಿದ್ದೆ. ಜನರ ಪರವಾಗಿ ಇರುವವನು ಕ್ಷಣದಲ್ಲಿ ಕ್ಷೇತ್ರ ಹೇಳುತ್ತಾನೆ. ಅದನ್ನು ಬಿಟ್ಟು ಈ ರೀತಿ ಕ್ಷೇತ್ರ ಪರದಾಟ ಮಾಡಲ್ಲ ಎಂದು ಸಿದ್ದುಗೆ ಟಾಂಗ್ ಕೊಟ್ಟಿದ್ದಾರೆ.
ಸಿದ್ದು ಮುಸ್ಲಿಮರನ್ನೇ ನೆಚ್ಚಿಕೊಂಡಿದ್ದಾರೆ
224 ಕ್ಷೇತ್ರಗಳಲ್ಲಿ ಎಲ್ಲಿ ನಿಂತರೂ ಸಿದ್ದರಾಮಯ್ಯಗೆ ಅವರ ಪಕ್ಷದವರೇ ಸೋಲಿಸುಸ್ತಾರೆ. ಎಲ್ಲೇ ನಿಂತರೂ ದಲಿತರು, ಹಿಂದುಳಿದವರು, ಒಕ್ಕಲಿಗರು, ಲಿಂಗಾಯಿತರು ಅವರನ್ನು ಸೋಲಿಸುಸ್ತಾರೆ. ಹೀಗಾಗಿ ಅಲ್ಪಸಂಖ್ಯಾತರನ್ನು ಮಾತ್ರ ಅವರು ನೆಚ್ಚಿಕೊಂಡಿದ್ದಾರೆ. ಅತಿ ಹೆಚ್ಚು ಮುಸಲ್ಮಾನರು ಇರುವ ಕ್ಷೇತ್ರ ಹುಡುಕುತ್ತಿದ್ದಾರೆ ಎಂದು ಛೇಡಿಸಿದ್ದಾರೆ.
ಕಾಂಗ್ರೆಸ್ ಜಾತಿ ಪರವಾಗಿ ಹೊರಟಿದೆ
ಜೆಡಿಎಸ್ ನ ಪಂಚರತ್ನ ಯಾತ್ರೆ, ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆ ಹೋಲಿಕೆ ಮಾಡಿದರೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಯಶಸ್ವಿಯಾಗಿದೆ. ನಾನೇ ಮುಖ್ಯಮಂತ್ರಿ ಅಂತ ಹೇಳೋದು ಕುಟುಂಬದ ಆಸ್ತಿಯಲ್ಲ. ಕೋಮುವಾದಿ ಅಂತ ರಾಷ್ಟ್ರೀಯವಾದಿ ಪಕ್ಷಕ್ಕೆ ಹೇಳುತ್ತಾರೆ. ಅವರು ರಾಷ್ಟ್ರೀಯವಾದಿಯಾಗಿದ್ದರೆ ನಾವು ಮಾತನಾಡುತ್ತಿರಲಿಲ್ಲ. ಈಗ ಸ್ಪಷ್ಟವಾಗಿ ಕಾಂಗ್ರೆಸ್ ಜಾತಿ ಪರವಾಗಿ ಹೊರಟಿದೆ ಎಂದು ಕೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.