ಬೆಂಗಳೂರು : 2 ಎ ಮೀಸಲಾತಿ ಹಾಗೂ ವಿವಿಧ ಬೇಡಿಕೆಗೆ ಆಗ್ರಹಿಸಿ ಹಲವು ತಿಂಗಳಿನಿಂದ ಪಂಚಮಸಾಲಿ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಬಸವ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣಿ ಮುಂದುವರಿದಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾರ್ಚ್ 24 ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯ ನಂತರ ಪಂಚಮಸಾಲಿಗಳಿಗೆ 2 ಎ ಮೀಸಲಾತಿ ನೀಡುವ ಬಗ್ಗೆ ಮಾಹಿತಿ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.
2 ಎ ಸಮುದಾಯಗಳನ್ನು 3 ಬಿಗೆ ಹಾಕುವ ಬಗ್ಗೆ ಯಾವುದೇ ವರದಿ ಇಲ್ಲ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳ ಬಳಿ ತಾಯಿ ಮೇಲೆ ಆಣೆ ಮಾಡಿ ಮೀಸಲಾತಿ ನೀಡುವುದಾಗಿ ಮಾತು ಕೊಟ್ಟಿದ್ದರು.
ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಅವರಿಗೆ 15 ರಷ್ಟು ವೇತನ ಹೆಚ್ಚಳ ಮಾಡಲಾಗಿದೆ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಮೂಲಭೂತ ಸೌಲಭ್ಯಗಳಿಗೆ ಒತ್ತು
ಕಳೆದ ಮೂರು ವರ್ಷಗಳಲ್ಲಿ ನೀರಾವರಿ, ಕುಡಿಯುವ ನೀರು, ರೈತರಿಗೆ ಅನುಕೂಲವಾಗುವ ಯೋಜನೆ, ಕೈಗಾರಿಕಾ ಅಭಿವೃದ್ಧಿ ಹಾಗೂ ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಲಾಗಿದೆ ಎಂದು ಹೇಳೀದ್ದಾರೆ.
ಹುನಗುಂದ ಮತ್ತು ಮುಧೋಳದಲ್ಲಿ ವಿವಿಧ ಕಟ್ಟಡಗಳ ಉದ್ಘಾಟನೆ ಮಾಡಲಾಗಿದೆ. ಮುದ್ದೇಬಿಹಾಳ ಕ್ಷೇತ್ರದಲ್ಲಿ 1600 ಕೋಟಿ ರೂ.ಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಕಳೆದ ಮೂರು ವರ್ಷಗಳ ಸರ್ಕಾರದ ನಿರ್ಣಯ, ಬಿಡುಗಡೆ ಮಾಡಿರುವ ಅನುದಾನ ಮತ್ತು ಅನುಷ್ಠಾನದ ಫಲವಾಗಿ ಇದಾಗುತ್ತಿದೆ. ನಮ್ಮ ಕೆಲಸಗಳು ಮಾತನಾಡಬೇಕು ಎಂದು ಹೇಳಿದ್ದಾರೆ.