ಬೆಂಗಳೂರು : ಉದ್ಯಮಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದ ಮಹಿಳೆಯೊಂದಿಗೆ ಇನ್ಸ್‌ಪೆಕ್ಟರ್ ಅಸಭ್ಯ ವರ್ತಿಸಿ, ಮಂಚಕ್ಕೆ ಬಾ.. ಎಂದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಹೌದು, ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎನ್. ರಾಜಣ್ಣ ಎಂಬವರ ವಿರುದ್ಧ ಮಹಿಳೆ ಆರೋಪ ಮಾಡಿದ್ದಾರೆ. ಈ ಸಂಬಂಧ ಯಲಹಂಕ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು, ಆಗ್ನೇಯ ಡಿಸಿಪಿ ಲಕ್ಷ್ಮಿ ಪ್ರಸಾದ್ ಅವರಿಗೆ ವರದಿ ಸಲ್ಲಿಸಿದ್ದಾರೆ.
ಮಹಿಳೆಯು ಕಳೆದ ತಿಂಗಳು ಉದ್ಯಮಿಯಿಂದ ತನಗೆ 15 ಲಕ್ಷ ರೂ. ವಂಚನೆಯಾಗಿದೆ ಎಂದು ಕೊಡಿಗೇಹಳ್ಳಿ ಪೊಲೀಸ್ ಠಾನೆಗೆ ದೂರು ನೀಡಿದ್ದರು. ಆಗ, ಮಹಾನುಭಾವ ಇನ್ಸ್‌ಪೆಕ್ಟರ್ ಮಹಿಳೆಯ ಮೊಬೈಲ್ ನಂಬರ್ ಪಡೆದಿದ್ದಾನೆ. ಆಮೇಲೆ ನಡೆದಿದ್ದೆಲ್ಲಾ ರಂಗಿತರಂಗಿ ಆಟವೇ ಸರಿ.
ಕೆಲವು ದಿನಗಳ ಬಳಿಕ ಮಹಿಳೆಯೊಂದಿಗೆ ಸಂದೇಶ (ಚಾಟ್) ಮಾಡಲು ಶರು ಮಾಡಿದ್ದ ಈ ಆಸಾಮಿ. ಮಹಿಳೆಗೆ ನಿರಂತರವಾಗಿ ಅನಗತ್ಯ ಚಾಟ್ ಮಾಡಿದ್ದಾನೆ. ಅಲ್ಲದೆ, ಪ್ರಕರಣದ ಬಗ್ಗೆ ಮಾಹಿತಿ ಪಡೆಯುವ ಸೋಗಿನಲ್ಲಿ ಪೊಲೀಸ್ ಠಾಣೆ ಬಾ.. ಎಂದಿದ್ದಾನೆ. ಬಳಿಕ, ಡ್ರೈ ಫ್ರೂಟ್ಸ್ ಮತ್ತು ರೂಮಿನ ಕೀ ಕೊಟ್ಟು ಉದ್ಧಟತನ ಪ್ರದರ್ಶಿಸಿದ್ದಾನೆ. ಈ ಬಗ್ಗೆ ಮಹಿಳೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಡಿಸಿಪಿ ಅಂಗಳ ತಲುಪಿದ್ದ ದೂರಿನ ತನಿಖೆ ಪೂರ್ಣಗೊಂಡಿದೆ. ಇದೀಗ ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರಿಗೆ ತನಿಖಾ ವರದಿಯೂ ಮುಟ್ಟಿದೆ. ಆರೋಪಿ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.