ಬೆಂಗಳೂರು : ದೇಶದಲ್ಲಿ ಕೊರೊನಾ ಸೋಂಕಿನ ಅಬ್ಬರ ನಿಧಾನವಾಗಿ ಹೆಚ್ಚುತ್ತಿದೆ. ಜೊತೆಯಲ್ಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಒಂದೇ ದಿನದಲ್ಲಿ 699 ಹೊಸ ಪ್ರಕರಣಗಳು ಪತ್ತೆಯಾಗಿದೆ.
ಹೌದು, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 699 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೆ, ಕೋವಿಡ್ ಸೋಂಕಿತ ಇಬ್ಬರು ಸಾವನ್ನಪ್ಪಿರುವುದು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಕ್ರಿಯ ಪ್ರಕರಣ ಏರಿಕೆ
ದೇಶದ ಒಟ್ಟು ಸಕ್ರಿಯ ಪ್ರಕರಣಗಳು ಪ್ರಸ್ತುತ 6,559. ಇದು ಒಟ್ಟು ಪ್ರಕರಣಗಳ ಶೇ 0.01 ರಷ್ಟಾಗಿದೆ. ಎರಡು ಸಾವುಗಳೊಂದಿಗೆ, ಒಟ್ಟಾರೆ ಕೋವಿಡ್ -19 ಸಾವಿನ ಸಂಖ್ಯೆ 5,30,808 ಕ್ಕೆ ಏರಿದೆ ಎಂದು ಹೇಳಿದೆ.
ಕಳೆದ 24 ಗಂಟೆಗಳಲ್ಲಿ 435 ರೋಗಿಗಳು ಚೇತರಿಸಿಕೊಂಡಿದ್ದು, ಚೇತರಿಸಿಕೊಂಡವರ ಸಂಖ್ಯೆ ಒಟ್ಟು 4,41,59,617 ಕ್ಕೆ ತಲುಪಿದೆ. ಚೇತರಿಕೆಯ ಪ್ರಮಾಣವು ಶೇ 98.79 ರಷ್ಟಾಗಿದೆ. ದೇಶದಾದ್ಯಂತ ಒಟ್ಟು 97,866 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಪರೀಕ್ಷಿತ ಒಟ್ಟು ಸಂಖ್ಯೆ 92.04 ಕೋಟಿಗೆ ಹೆಚ್ಚಾಗಿದೆ.
ಇನ್ನೂ, ಕಳೆದ 24 ಗಂಟೆಗಳಲ್ಲಿ 7,463 ಡೋಸ್ ಲಸಿಕೆ ನೀಡಲಾಗಿದೆ. ಈವರೆಗೆ ಭಾರತವು ಒಟ್ಟು 220.65 ಕೋಟಿ ಲಸಿಕೆಗಳನ್ನು ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.