ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಸಮುದಾಯಗಳ ಓಲೈಕೆಗೆ ಮುಂದಾಗಿವೆ. ಆಡಳಿತರೂಢ ಬಿಜೆಪಿ ಪಕ್ಷವೂ ಇದರಿಂದ ಹೊರತಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಡವರಿಗೆ ಸಿಹಿ ಸುದ್ದಿ ಕೊಡಲು ಮುಂದಾಗಿದ್ದಾರೆ.
ಹೌದು, ಕೊಡವರು ದೈಹಿಕ ಶಕ್ತಿ ಇರುವವರು ಭಾರತ ದೇಶವನ್ನು ಕಾಯುವ ಸ್ಫೂರ್ತಿವುಳ್ಳವರು ಎಂದು ಹಾಡಿ ಹೊಗಳಿರುವ ಸಿಎಂ ಬೊಮ್ಮಾಯಿ, ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕೂಡಲೇ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕೊಡಗಿನ ಅಪ್ಪಚೆಟ್ಟೋಳಂಡ 2022-23ನೇ ಸಾಲಿನ ಕೊಡವ ಹಾಕಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ನಶಿಸಿಹೋಗುತ್ತಿರುವ ಕುಟುಂಬ ಸಂಬಂಧಗಳನ್ನು ಪುನರ್ ಸ್ಥಾಪಿಸಲು ಅಪ್ಪಚೆಟ್ಟೋಳಂಡ ಹಾಕಿ ಉತ್ಸವ ಸಹಕಾರಿಯಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಇದು ಭಾರತೀಯ ಪರಂಪರೆ
ಇಂದೊಂದು ವಿಶೇಷ ಕ್ರೀಡಾಕೂಟ. ಕೊಡಗಿನ ಕುಟುಂಬಗಳು ಸೇರಿ ಈ ಕ್ರೀಡಾಕೂಟ ಆಯೋಜಿಸಿರುವುದು ಅದ್ಭುತ ಕಲ್ಪನೆ. ಕೊಡಗಿನ ಕುಟುಂಬಗಳು ಅತ್ಯಂತ ಒಳ್ಳೆಯ ಸಂಬಂಧವಲ್ಲ ಕುಟುಂಬಗಳು. ಕೊಡಗಿನ ಸಂಸ್ಕೃತಿ, ಆಚಾರ ವಿಚಾರ ಎಲ್ಲರನ್ನೂ ಒಂದು ಮಾಡುತ್ತದೆ ಎಂದು ಹೇಳಿದ್ದಾರೆ.
ನಿಮ್ಮ ಉಡುಗೆ, ಆಹಾರ ಎಲ್ಲವೂ ವಿಶೇಷ. ಹಾಕಿ ನಿಮ್ಮ ಪ್ರೀತಿಯ ಪಂದ್ಯ. 23 ವರ್ಷಗಳಿಂದ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ. ಕುಟುಂಬಗಳು ಹಾಗೂ ಸಂಬಂಧಗಳು ಒಂದಾಗಬೇಕು. ಇದು ನಮ್ಮ ಭಾರತೀಯ ಪರಂಪರೆ. ಇಡೀ ಜಗತ್ತಿನಲ್ಲಿ ಈ ರೀತಿಯ ಕ್ರೀಡೆ ಎಲ್ಲಿಯೂ ಇಲ್ಲ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಂ.ಎಲ್.ಸಿ, ಪ್ರತಾಪ್ ಸಿಂಹ ನಾಯಕ್, ಕೊಡವ ಹಾಕಿ ಅಕಾಡೆಮಿ ನಿರ್ದೇಶಕ ಚೈಯಂಡ ಸತ್ಯ, ಮನು ಮುತ್ತಪ್ಪ, ಪದ್ಮಶ್ರೀ ರಾಣಿ ಮಾಚಯ್ಯ, ಎಂ.ಪಿ ಗಣೇಶ್ ಅರ್ಜುನ ಪ್ರಶಸ್ತಿ ವಿಜೇತ ಸುಬ್ಬಯ್ಯ ಮತ್ತಿತರಿದ್ದರು.