ಬೆಂಗಳೂರು : ಜೆಡಿಎಸ್ ಪುಟಗೋಸಿ ಎಂದು ಕರೆದಿದ್ದ ಕಾಂಗ್ರೆಸ್ ಮುಖಂಡ ಎಂ.ಪಿ. ನರೇಂದ್ರ ಸ್ವಾಮಿ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮಂಡ್ಯದಲ್ಲಿ ತಿರುಗೇಟು ಕೊಟ್ಟಿದ್ದಾರೆ. ಚುನಾವಣೆ ಫಲಿತಾಂಶ ಬರಲಿ, ಆಗ ಯಾರದ್ದು ಪುಟಗೋಸಿ ಎಂದು ಗೊತ್ತಾಗಲಿದೆ ಎಂದಿದ್ದಾರೆ.
ಕಾಂಗ್ರೆಸ್ ನವರು ಮೊದಲು ಅವರ ಪಕ್ಷದ ಪುಟಗೋಸಿ ಸರಿಪಡಿಸಿಕೊಳ್ಳಲಿ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಕ್ಷೇತ್ರ ಹುಡುಕಿಕೊಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ನವರು ಮೊದಲು ಅವರ ನಾಯಕನಿಗೆ ಕ್ಷೇತ್ರ ಹುಡುಕಿ ಬಳಿಕ ಜೆಡಿಎಸ್ ಬಗ್ಗೆ ಮಾತನಾಡಲಿ ಎಂದು ಟಾಂಗ್ ಕೊಟ್ಟಿದ್ದಾರೆ.
ರೌಡಿಶೀಟರ್ ಸೈಲೆಂಟ್ ಸುನೀಲ ಬಿಜೆಪಿ ಪಕ್ಷದ ಅಧಿಕೃತ ಸದಸ್ಯತ್ವ ಪಡೆದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ, ಬಿಜೆಪಿ ನಾಯಕರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೈಲೆಂಟ್ ಸುನೀಲ, ಸ್ಯಾಂಟ್ರೋ ರವಿ, ಫೈಟರ್ ರವಿ ಅಂತವರೇ ಬಿಜೆಪಿಗೆ ಸೇರಿಕೊಳ್ಳೋದು. ಇವರಿಗೆ ಪ್ರಾಮುಖ್ಯತೆ ಕೊಡೋದು ಬೇಡ ಎನ್ನುವುದು ಅಭಿಪ್ರಾಯ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯ ವಿಧಾನಸೌಧದಲ್ಲಿ ಇರಬೇಕು : ಸಿ.ಎಂ ಇಬ್ರಾಹಿಂ
ಬಿಜೆಪಿಯವರು ನೈತಿಕತೆ ಭಾಷಣ ಮಾಡುತ್ತಾರೆ. ಅದರ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಜನ ಇಂತವರ ಬಗ್ಗೆ, ಇಂಥ ಪಕ್ಷಗಳ ಬಗ್ಗೆ ಎಚ್ಚರವಾಗಿರಬೇಕು. ಯಾವುದೇ ಕಾರಣಕ್ಕೂ ಇಂಥವರಿಗೆ ಮತ ನೀಡಬಾರದು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ರೌಡಿ ಶೀಟರ್ ಗಳಿಗೆ ಎಗ್ಗಿಲ್ಲದೆ ಟಿಕೆಟ್
ಕಾಂಗ್ರೆಸ್, ಬಿಜೆಪಿ ರೌಡಿ ಶೀಟರ್ ಗಳಿಗೆ ಎಗ್ಗಿಲ್ಲದೆ ಪಕ್ಷದಲ್ಲಿ ಟಿಕೆಟ್ ನೀಡುತ್ತಿವೆ. ಆಸೆಗೆ ಅಮಾಯಕರ ಜೀವನ ಬಲಿ ಪಡೆದವರನ್ನ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಕೊಡ್ತಿದ್ದಾರೆ. ಅದೇ ಅವರ ಪಕ್ಷಕ್ಕೆ ಮುಳುಗಲಿದೆ. ಪಾಪದ ಹಣ ಮಾಡಲು ಹೊರಟಿದ್ದು, ಅವರಿಗೆ ಮುಳುವಾಗಲಿದೆ ಎಂದು ಹೇಳಿದ್ದಾರೆ.