ಬೆಂಗಳೂರು : ಹಾಸನ ಟಿಕೆಟ್ ಕಾಳಗ ಕುರಿತು ವ್ಯಂಗ್ಯವಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹಾಸನದಲ್ಲಿಯೇ ಜೆಡಿಎಸ್‌ನ ಪಂಚರತ್ನ ಯಾತ್ರೆಯ ಎಂಜಿನ್ ಸೀಜ್ ಆಗಿದೆ ಎಂದು ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯ ಧ್ವನಿಯೇ ಕೇಳಿಸುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 60ರಿಂದ 70ಕ್ಕಿಂತ ಅಧಿಕ ಸ್ಥಾನಗಳನ್ನು ಪಡೆಯುವುದಿಲ್ಲ. ಜೆಡಿಎಸ್ ಪಕ್ಷ 25 ಸ್ಥಾನ ದಾಟಲು ನಾವು ಬಿಡುವುದಿಲ್ಲ ಎಂದು ನಳಿನ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : ಸಿಎಂ ಬೊಮ್ಮಾಯಿ ಸೋಲು : ಇದೇ ಕಾಂಗ್ರೆಸ್ ಮಾಸ್ಟರ್ ಪ್ಲಾನ್
ಯಾವ ಸಮ್ಮಿಶ್ರ ಸರ್ಕಾರವೂ ಬರಲ್ಲ
150 ಸ್ಥಾನಗಳನ್ನು ಗೆಲ್ಲಬೇಕು ಎಂಬ ಗುರಿ ನಮ್ಮದಾಗಿತ್ತು. ಜನರ ಸ್ಪಂದನೆ ನೋಡಿದರೆ 150 ಮೀರಿ ಗೆಲ್ಲಲಿದ್ದೇವೆ. ಯಾವ ಸಮ್ಮಿಶ್ರ ಸರ್ಕಾರವೂ ಬರುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 25ರಂದು ನಡೆಯುವ ಈ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಲು ಜನರು ಕಾತರರಾಗಿದ್ದಾರೆ. ಮಾ.25ರವರೆಗೆ ವಿಜಯ ಸಂಕಲ್ಪ ಯಾತ್ರೆ, ಬಳಿಕ ವಿಜಯ ದುಂದುಬಿಯಾಗಲಿದೆ. ಬಿಜೆಪಿಗೆ ಶಕ್ತಿ ತುಂಬುವ ಸಮಾವೇಶ ಇದಾಗಲಿದೆ ಎಂದು ಕಟೀಲ್ ಹೇಳಿದ್ದಾರೆ.
ಮಾರ್ಚ್ 25ರಂದು ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ, ನಾಲ್ಕು ರಥಗಳ ಮಹಾ ಸಂಗಮ ಕಾರ್ಯಕ್ರಮ ಹಿನ್ನೆಲೆಯಲ್ಲಿ ದಾವಣಗೆರೆಯ ಜಿಎಂಐಟಿ ಬಳಿ ಭೂಮಿ ಪೂಜೆ ನೆರವೇರಿಸಿದರು.