ಬೆಂಗಳೂರು : ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಆಪ್ತರಾದ ಎರಿಕ್ ಗಾರ್ಸೆಟ್ಟಿ ಭಾರತದಲ್ಲಿ ಅಮೆರಿಕ ರಾಯಭಾರಿಯಾಗಿ ನೇಮಕವಾಗಿದ್ದಾರೆ.
ಎರಿಕ್ ಗಾರ್ಸೆಟ್ಟಿ ಅವರ ನಾಮನಿರ್ದೇಶನವನ್ನು ಅಮೆರಿಕದ ಸೆನೆಟ್ 52-42 ಮತಗಳಿಂದ ಅನುಮೋದನೆ ನೀಡಿದೆ. ಈ ವರ್ಷ ಜನವರಿಯಲ್ಲಿ ಬೈಡನ್ ಅವರು ಮತ್ತೊಮ್ಮೆ ಎರಿಕ್ ಅವರನ್ನು ರಾಯಭಾರಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದರು.
ಎರಿಕ್ ಅವರ ನಾಮನಿರ್ದೇಶನವನ್ನು ಮತಕ್ಕೆ ಹಾಕಲು ಅಮೆರಿಕ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ಬಾಬ್ ಮೆನೆಂಡೆಝ್ ಅವರು ಕಳೆದ ಫೆಬ್ರವರಿ 28ಕ್ಕೆ ದಿನಾಂಕ ನಿಗದಿಪಡಿಸಿದ್ದರು. ಆದರೆ ಇದನ್ನು ಇಲ್ಲಿಯವರೆಗೂ ಮುಂದೂಡಲಾಗಿತ್ತು. ಕೊನೆಗೂ ಎರಿಕ್ ಗಾರ್ಸೆಟ್ಟಿ ಅಮೆರಿಕಾ ರಾಯಭಾರಿಯಾಗಿ ನೇಮಕವಾಗಿದ್ದಾರೆ.
ಚೀನಾದ ದಬ್ಬಾಳಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಮೆರಿಕ, ಭಾರತದೊಂದಿಗೆ ಬಲಿಷ್ಠ ರಕ್ಷಣಾ ಮತ್ತು ಕಾರ್ಯತಂತ್ರ ಆಧಾರಿತ ಪಾಲುದಾರಿಕೆ ಹೊಂದುವ ಅಗತ್ಯವಿದೆ. ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧ ಮತ್ತು ರಾಷ್ಟ್ರೀಯ ಭದ್ರತೆ ಬಲಗೊಳಿಸಲು ಭಾರತಕ್ಕೆ ರಾಯಭಾರಿಯನ್ನು ನೇಮಕ ಮಾಡುವುದು ಅತ್ಯಗತ್ಯ ಎಂದು ಅಮೆರಿಕ ಹೇಳಿದೆ.