ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದ ಸುಮಲತಾ ಅಂಬರೀಶ್ ರಾಜ್ಯ ರಾಜಕೀಯ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ. ಇಂದು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಹಿ ಘಟನೆಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿ, ಲೋಕಸಭೆ ಚುನಾವಣೆ ವೇಳೆ ಹೆಣ್ಣು ಎಂಬ ಕನಿಕರ ತೋರದೆ ವಿರೋಧಿಗಳು ಏನೇನು ಮಾಡಿದರು ಜನ ನೋಡಿದ್ದಾರೆ ಎಂದು ಬಾವುಕರಾಗಿದ್ದಾರೆ.
ಅಕ್ರಮ ಗಣಿಗಾರಿಕೆ ವಿಷಯದಲ್ಲಿ ನನ್ನ ಮೇಲೆ ಹಲ್ಲೆಗೆ ಪ್ರಯತ್ನ ಮಾಡಿದ್ದರು. ಅವಾಚ್ಯ ಶಬ್ದದಿಂದ ನಿಂದಿಸಿದರು. ಆದರೆ, ಅವರ ಸ್ವಾರ್ಥಕ್ಕಾಗಿ ಮಾಡಿದ ಪ್ರಯತ್ನಕ್ಕೆ ನಾನು ಎಂದು ತಲೆ ಕೆಡಿಸಿಕೊಂಡಿಲ್ಲ. ಆದರೆ ನಾನು ಶ್ರಮ ಪಟ್ಟು ಎಲ್ಲವನ್ನೂ ತಡೆದುಕೊಂಡು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದೆ. ಜನರ ಮನಸ್ಸು ಗೆದ್ದು ಕೆಲಸ ಮಾಡಿದೆ ಎಂದು ಸುಮಲತಾ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ : ಸುಮಲತಾ ಬಿಜೆಪಿ ಸೇರ್ಪಡೆ ಬಗ್ಗೆ ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ
ಅಂಬಿ ಅಭಿಮಾನಕ್ಕೆ ಮನಸೋತೆ
ಮಂಡ್ಯದ ಜನತೆ ಅಂಬರೀಶ್ ಅವರಿಗೆ ನೀಡಿದ ಪ್ರೀತಿಯನ್ನು ನೋಡಿ ಕಳೆದ ಬಾರಿ ಮುಖ್ಯಮಂತ್ರಿಯನ್ನು ಎದುರು ಹಾಕಿಕೊಂಡು ಪಕ್ಷೇತರವಾಗಿ ಲೋಕಸಭೆಗೆ ಸ್ಪರ್ಧೆ ಮಾಡಿದ್ದೆ ಎಂದು ಸುಮಲತಾ ಹೇಳಿದ್ದಾರೆ.
ಮಂಡ್ಯದ ಜನರು ಯಾರಿಗೆ ಏನು ಕೊಟ್ಟಿದ್ದಾರೆ ಅನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಆದರೆ, ಅಂಬರೀಶ್ ಅವರಿಗೆ ಸಿಕ್ಕಿದ ಪ್ರೀತಿ ಯಾರಿಗೂ ಸಿಕ್ಕಿಲ್ಲ. ನಾನೆಂದೂ ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿಲ್ಲ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದೇನೆ ಎಂದು ಇದೇ ವೇಳೆ ಸುಮಲತಾ ತಿಳಿಸಿದ್ದಾರೆ.