Sunday, November 24, 2024

ವಿಷ್ಣು ದಾದಾ ಅಭಿನಯದ ‘ನಿಷ್ಕರ್ಷ’ ರೀ ರಿಲೀಸ್​

ವಿಷ್ಣುವರ್ಧನ್.. ಚಂದನವನದ ದಿಗ್ಗಜ… ವಿಷ್ಣುದಾದ ಇವತ್ತು ನಮ್ಮೊಂದಿಗಿಲ್ಲ.. ಆದರೆ ಅವರು ಅವರ ನಡೆ-ನುಡಿ, ಸಿನಿಮಾಗಳಿಂದ ನಮ್ಮೊಂದಿಗೆ ಸದಾ ಇದ್ದಾರೆ… ವಿಷ್ಣು ಎಂದೆಂದಿಗೂ ಅಜರಾಮರ.. ಸ್ಯಾಂಡಲ್ವುಡ್ ಅವರ ಕೊಡುಗೆಯನ್ನು ಎಂದೂ ಮರೆಯದು.
ವಿಷ್ಣುವರ್ಧನ್ ನಾಯಕ ನಟನಾಗಿ ಬಣ್ಣ ಹಚ್ಚಿದ ಚೊಚ್ಚಲ ಸಿನಿಮಾ ನಾಗರಹಾವಿಂದ ಹಿಡಿದು ಕೊನೆಯ ಭಾರಿ ನಟಿಸಿದ್ದ ಆಪ್ತರಕ್ಷಕದವರೆಗೂ ಬಹುತೇಕ ಎಲ್ಲಾ ಸಿನಿಮಾಗಳು ಎವರ್ ಗ್ರೀನ್.. ಅಂಥಾ ಸಿನಿಮಾಗಳಲ್ಲಿ ನಿಷ್ಕರ್ಷ ಸಹ ಒಂದು.
ಹೌದು, ನಿಷ್ಕರ್ಷ..1993ರಲ್ಲಿ ತೆರೆಕಂಡ ಸ್ಯಾಂಡಲ್ವುಡ್​ನ ಸೂಪರ್ ಹಿಟ್ ಸಿನಿಮಾ. ಸಾಹಸ ಸಿಂಹ ವಿಷ್ಣುವರ್ಧನ್ ಎಟಿಎಸ್ ಕಮಾಂಡೋ ಆಗಿ ಮಿಂಚಿದ್ದ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದವರು ಡೈರೆಕ್ಷರ್ ಸುನೀಲ್ ಕುಮಾರ್ ದೇಸಾಯಿ. ಬಿ.ಸಿ ಪಾಟೀಲ್ ನಿರ್ಮಾಣದ ಚೊಚ್ಚಲ ಸಿನಿಮಾ ಕೂಡ ಇದೇ ನಿಷ್ಕರ್ಷ.. ವಿಷ್ಣುದಾದ – ದೇಸಾಯಿ ಮತ್ತು ಬಿ.ಸಿ ಪಾಟೀಲ್ ಕಾಂಬಿನೇಷನ್ನ ಈ ಚಿತ್ರ ಭಾರೀ ಸದ್ದು ಮಾಡಿತ್ತು.
ಬ್ಯಾಂಕ್ ದರೋಡೆ ಕುರಿತ ನಿಷ್ಕರ್ಷ ಆ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲೊಂದು ವಿಭಿನ್ನ ಪ್ರಯೋಗ. ಕನ್ನಡ ಸಿನಿಮಾ ಇತಿಹಾಸದಲ್ಲೇ ನೆನಪಿನಲ್ಲಿಡೋ ಅದ್ಭುತ ಸಿನಿಮಾ, ಥ್ರಿಲ್ಲರ್ ಜಾನರ್​​​ನಲ್ಲೇ ನಿಷ್ಕರ್ಷ ಹೊಸದೊಂದು ದಾಖಲೆ ಸೃಷ್ಟಿಸಿತ್ತು. ವಿಷ್ಣುವರ್ಧನ್ ಸಿನಿಮಾ ಗ್ರಾಫ್​ನಲ್ಲೂ ನಿಷ್ಕರ್ಷದ್ದು ದೊಡ್ಡ ಪಾಲಿದೆ. ಒಂದೇ ಲೊಕೇಷನ್. ಸ್ಮಾಲ್ ಬಜೆಟ್.. ಬೆರಳೆಣಿಕೆ ಪಾತ್ರ.. ಇಟ್ಟುಕೊಂಡೇ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದ ಸಿನಿಮಾವದು.
ಕಥೆ – ಚಿತ್ರಕಥೆ ಜೊತೆಗೆ ವಿಷ್ಣು ನಟನೆ, ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಜನಮನ್ನಣೆ ಪಡೆದಿತ್ತು. ಅಲ್ಲದೇ ಮೂರು ರಾಜ್ಯ ಪ್ರಶಸ್ತಿಯನ್ನುತನ್ನ ಮುಡಿಗೇರಿಸಿಕೊಂಡಿತ್ತು, ನಿಷ್ಕರ್ಷ ಸಿನಿಮಾ . ಅಂದು ಪ್ರತಿ ಕ್ಷಣಕ್ಕೂ ಥ್ರಿಲ್ ಹುಟ್ಟಿಸಿದ್ದ ನಿಷ್ಕರ್ಷ ಮತ್ತೊಮ್ಮೆ ಥಿಯೇಟರ್ ನಲ್ಲಿ ಅಬ್ಬರಿಸ್ತಿದೆ.
ಏಕಕಾಲದಲ್ಲಿ ಕನ್ನಡ-ಹಿಂದಿ ಭಾಷೆಯಲ್ಲಿ ರೀ ರಿಲೀಸ್ ಆಗಿರುವ ಈ ಸಿನಿಮಾ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ವಿಶೇಷ ಅಂದ್ರೆ ಡಿಜಿಟಲ್ ಅವತಾರದಲ್ಲಿ ‘ನಿಷ್ಕರ್ಷ’ ಬಿಗ್ ಸ್ಕ್ರೀನ್ ನಲ್ಲಿ ಅಬ್ಬರಿಸ್ತಿದೆ. ಮೊದಲಿಗಿಂತಲೂ ಕ್ವಾಲಿಟಿ ವಿಶ್ಯುವಲ್, ಮ್ಯೂಸಿಕ್ ಇವೆಲ್ಲವು ಸಿನಿಮಾದಲ್ಲಿ ಭಾರಿ ಸದ್ದು ಮಾಡ್ತಾಯಿದೆ. ಒಟ್ಟಾರೆಯಾಗಿ ವಿಷ್ಣುದಾದಾರ ನಿಷ್ಕರ್ಷ 26 ವರ್ಷಗಳ ಬಳಿಕ ಮತ್ತೆ ರೀ ರಿಲೀಸ್ ಆಗಿದ್ದು, ಮೊನ್ನೆಯಷ್ಟೇ ವಿಷ್ಣು ದಾದಾರ ಜಯಂತೋತ್ಸವ ಆಚರಿಸಿದ್ದ ಅಭಿಮಾನಿಗಳು ನಿಷ್ಕರ್ಷ ಮೂಲಕ ಮತ್ತೊಮ್ಮೆ ವಿಷ್ಣುದಾದಾರನ್ನು ಬೆಳ್ಳಿ ಪರದೆ ಮೇಲೆ ಕಣ್ತುಂಬಿಕೊಂಡು ಖುಷಿ ಪಡ್ತಿದ್ದಾರೆ.

RELATED ARTICLES

Related Articles

TRENDING ARTICLES