ಬೆಂಗಳೂರು : ಹಳೆ ಮೈಸೂರು ಭಾಗ ಹಾಗೂ ಮಂಡ್ಯದಲ್ಲಿ ಈ ಬಾರಿ ಕಮಲ ಅರಳುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅಲೆ ಮುಂದೆ ಜೆಡಿಎಸ್ ಧೂಳಿಪಟ ಅಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪಂಚ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ನಡೆದ ನಾಗಮಂಗಲ ವಾಸಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ನಿಮ್ಮ ಮನೆ ಮಕ್ಕಳು ನಾವು. ನಮಗೆ ವಿಷ ಹಾಕಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಮಂಡ್ಯ ದೇವೇಗೌಡ್ರ ಭದ್ರಕೋಟೆ
ಮಂಡ್ಯ ಜಿಲ್ಲೆ ದೇವೇಗೌಡರ ಭದ್ರಕೋಟೆ. ಪಾಪ ಅಮಿತ್ ಶಾ ಬಂದು ಇವಾಗ ಡೈನಾಮಿಕ್ ಇಟ್ಟು ಉಡಾಯಿಸ್ತೀನಿ ಅಂತಾ ಬಂದಿದ್ದಾರೆ. ಆದರೆ ದೇವೇಗೌಡರ ಮೇಲೆ ಅಲ್ಲಿಟ್ಟಿರುವ ಜನರ ಪ್ರೀತಿ ಮುಂದೆ ಯಾವ ಡೈನಾಮಿಕ್ ವರ್ಕೌಟ್ ಆಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಲ್ಲಿ ದೇವೇಗೌಡರು ಕಾವೇರಿ ನೀರಿಗಾಗಿ ಮಾಡಿದ ಹೋರಾಟ ಯಾವ ಅಮಿತ್ ಶಾ, ಯಾವ ಅಶ್ವತ್ಥನಾರಾಯಣಗೂ ಗೊತ್ತಿಲ್ಲ. ಮಂಡ್ಯದಲ್ಲಿ ಬಿಜೆಪಿಯ ಪಾಪದ ಹಣವನ್ನು ತಂದು ಕೆ.ಆರ್ ಪೇಟೆ ಚುನಾವಣೆ ಮಾಡಿದ್ರು ಎಂದು ಆರೋಪ ಮಾಡಿದ್ದಾರೆ.
ಸ್ವಾಭಿಮಾನ ಕಾಲು ಕೆಳಗೆ ಹೋಗುತ್ತೆ
ಇನ್ನೂ, ಸ್ವಾಭಿಮಾನಿ ಸಂಸದೆ ಸುಮಲತಾ ವಿರುದ್ದ ಪರೋಕ್ಷವಾಗಿ ಕಿಡಿಕಾರಿದ ಎಚ್.ಡಿ ಕುಮಾರಸ್ವಾಮಿ, ಅದೇನೋ ಸ್ವಾಭಿಮಾನ ಅಂತ ಚುನಾವಣೆ ಗೆದ್ದಿದ್ದಾರೆ. ಆದರೆ ಈ ಸ್ವಾಭಿಮಾನ ಬಿಜೆಪಿ ಹಾಗೂ ಅಮಿತ್ ಶಾ ಕಾಲು ಕೆಳಗೆ ಹೋಗುತ್ತೆ ಎಂದು ಲೇವಡಿ ಮಾಡಿದ್ದಾರೆ.
HDD ಆರೋಗ್ಯದ ಬಗ್ಗೆ ಭಾವುಕ
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಆರೋಗ್ಯದ ಬಗ್ಗೆ ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ದೇವೇಗೌಡರಿಗೆ ನಿನ್ನೆ ಒಂದು ಮಾತು ಕೊಟ್ಟು ಬಂದಿದ್ದೇನೆ. ಅವ್ರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ.
ನನಗೆ ನಿಮ್ಮ ಜೀವ ಮುಖ್ಯ, ಯಾವುದೇ ಕಾರಣಕ್ಕೂ ನೀವು ನೊಂದುಕೊಳ್ಳಬೇಡಿ. ನಾನು ಹಾಕೊಂಡಿರುವ ಕಾರ್ಯಕ್ರಮ ಗಳನ್ನು ಜನರಿಗೆ ಅನುಷ್ಠಾನ ಮಾಡಲು ನೀವು ನೋಡೋ ಶಕ್ತಿಯನ್ನು ಆ ದೇವರು ನಿಮಗೆ ಕೊಡ್ತಾನೆ. ನಿಮ್ಮನ್ನು ಆ ಶಿವ ಕರೆದುಕೊಳ್ಳಲ್ಲ ಎಂದು ಭಾವನಾತ್ಮಕ ಮಾತುಗಳನ್ನು ಹಾಡಿದ್ದಾರೆ.