ಬೆಂಗಳೂರು : ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರನ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಬಿಜೆಪಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಲೇವಡಿ ಮಾಡಿದ್ದಾರೆ.
ದಾವಣಗೆರೆಯ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರ ಅಭಿಯಾನ ಆರಂಭಿಸಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ನಿವಾಸದಲ್ಲಿ 10 ಸಾವಿರ ರೂ. ನಗದು ಸಿಕ್ಕಿತ್ತು. ಅವರನ್ನು ಬಂಧಿಸಲಾಯಿತು. ಆದರೆ, ಇಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಹಾಗೂ ಅವರ ಮನೆಯಲ್ಲಿ ಕೋಟಿ ಕೋಟಿ ನಗದು ಸಿಕ್ಕಿದೆ. ಆದರೂ, ಅವರನ್ನು ಯಾಕೆ ಬಂಧಿಸಿಲ್ಲ ಎಂದು ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಸಾಕಪ್ಪ.. ಸಾಕು 40% ಸರ್ಕಾರ : ಸಿದ್ದರಾಮಯ್ಯ ಆಕ್ರೋಶ
ಮುಂದಿನ ವರ್ಷ ಪದ್ಮಭೂಷಣ ಕೊಡ್ತಾರೆ
ಕರ್ನಾಟಕದ ಜನರು ದೇಶಭಕ್ತರು, ಕಷ್ಟ ಪಡುವವರು. ಆದರೆ, ರಾಜ್ಯದಲ್ಲಿರುವ ನಾಯಕರು ಕೆಟ್ಟವರು. ಇಲ್ಲಿರುವುದು 40% ಕಮಿಷನ್ ಸರ್ಕಾರ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಬಂದು ದೊಡ್ಡ ದೊಡ್ಡ ಮಾತನಾಡುತ್ತಾರೆ. 8 ಕೋಟಿ ರೂ. ನಗದು ಸಮೇತ ಈ ಜಿಲ್ಲೆಯ ನಾಯಕನ ಪುತ್ರ ಸಿಕ್ಕಿಬಿದ್ದಿದ್ದಾನೆ. ಮುಂದಿನ ವರ್ಷ ಇವರಿಗೆ ಪದ್ಮಭೂಷಣ ಪ್ರಶಸ್ತಿ ಕೂಡ ಕೊಡುತ್ತಾರೆ ಎಂದು ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ.
ನಮ್ಮದು 0% ಕಮಿಷನ್ ಸರ್ಕಾರ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ಖರ್ಚು ಮಾಡಿದರೂ ಯಾವುದೇ ಉಚಿತ ಯೋಜನೆಗಳಿಲ್ಲ. ನಮ್ಮದು ಸಾಲ ಇಲ್ಲದ ಬಜೆಟ್. ನಮ್ಮದು 0% ಕಮಿಷನ್ ಸರ್ಕಾರ ಎಂದು ಅವರು ಹೇಳಿದರು. ಪಂಜಾಬ್ನಲ್ಲೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ. ನನ್ನ ಮಗ ಭ್ರಷ್ಟಾಚಾರ ಮಾಡಿದರೂ ಜೈಲಿಗೆ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಖಾಲಿ ಕುರ್ಚಿಗಳಿಗೆ ಸಿದ್ದರಾಮಯ್ಯ ಭಾಷಣ : ಬಿಜೆಪಿಗರಿಗೆ ಆಹಾರವಾದ್ರ ಸಿದ್ದು..!
ಬಿಜೆಪಿ ನಾಯಕರೇ, ನಿಮಗೆ ತಾಕತ್ತಿದ್ದರೆ ಒಳ್ಳೆಯ ಶಾಲೆ ಮಾಡಿ ತೋರಿಸಿ ನೋಡೋಣ ಎಂದು ಇದೇ ವೇಳೆ ಕೇಜ್ರೀವಾಲ್ ಬಿಜೆಪಿ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.