ಬೆಂಗಳೂರು : ಏಳನೇ ವೇತನ ಆಯೋಗದ ವರದಿ ಜಾರಿ, ಹಳೆಯ ಪಿಂಚಣಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಹಿ ಸುದ್ದಿ ನೀಡಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ಶೇ.17ರಷ್ಟು ವೇತನ ಹೆಚ್ಚಳ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆ ಮೂಲಕ ಪ್ರತಿಭಟನೆ ನಿರತ ನೌಕರರ ಮನವೊಲಿಸುವ ಪ್ರಯತ್ನ ಮಾಡಿದೆ.
ಶೇ.40ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಸರ್ಕಾರಿ ನೌಕರರು ಪಟ್ಟು ಹಿಡಿದಿದ್ದರು. ಆದರೆ, ಶೇ.17ರಷ್ಟು ವೇತನ ಹೆಚ್ಚಳ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಪ್ಪಿಗೆ ಸೂಚಿಸಿದ್ದಾರೆ.
ಮಧ್ಯಂತರ ಆದೇಶಕ್ಕೆ ಸಿಎಂ ಸೂಚನೆ
ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ನೌಕರರಿಗೆ ಶೇ.17ರಷ್ಟು ವೇತನ ಹೆಚ್ಚಳ ಮಾಡಲು ನಿರ್ಧರಿಸಿದ್ದಾರೆ. ಈ ಕುರಿತು ಮಧ್ಯಂತರ ಆದೇಶ ನೀಡಲು ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ನೌಕರರ ಪ್ರತಿಭಟನೆ ಮುಂದುವರಿಕೆ
ಸಿಎಂ ಬಸವರಾಜ ಬೊಮ್ಮಾಯಿ ಅವರು ಶೇ.17ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಘೋಷಿಸಿರುವ ಬಗ್ಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಕೇವಲ ಭರವಸೆ ಆಗಿ ಉಳಿಯಬಾರದು. ಆದೇಶ ಆದ ಮೇಲೆ ನಾವು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಶೀಘ್ರ ಎಂದರೆ ಯಾವಾಗ? ಅದನ್ನು ಆದೇಶ ರೂಪದಲ್ಲಿ ಜಾರಿಯಾಗಲಿ ಎಂದು ಅವರು ತಿಳಿಸಿದ್ದಾರೆ. ಅಲ್ಲಿಯವರೆಗೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಿ.ಎಸ್ ಷಡಕ್ಷರಿ ಹೇಳಿದ್ದಾರೆ.