ಇಂದು ಹನುಮನ ಜನ್ಮಸ್ಥಳಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ ಭೇಟಿ ನೀಡಿದರು.
ಕೊಪ್ಪಳದ ಗಂಗಾವತಿಗೆ ಶಿಕ್ಷಕರ ದಿನಾಚರಣೆಗೆ ಎಂದು ಆಗಮಿಸಿದ ಅವರು ಕಾರ್ಯಕ್ರಮ ಮುಗಿಸಿಕೊಂಡು ಸೀದಾ ಅಂಜನಾದ್ರಿ ಪರ್ವತಕ್ಕೆ ಹೋಗಿ ಆಂಜನೇಯ ಸ್ವಾಮಿ ದರ್ಶನ ಪಡೆದರು.
ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತ ಇದು ಐತಿಹಾಸಿಕ ಹಿನ್ನಲೆಯುಳ್ಳ ಸ್ಥಳವಾಗಿದ್ದು. ಹನುಮನ ಜನ್ಮಸ್ಥಳ ಕಿಷ್ಕಿಂದಾ ಎಂದೇ ಕರೆಯಲ್ಪಡುತ್ತದೆ. ಬರೊಬ್ಬರಿ 575 ಮೆಟ್ಟಿಲುಗಳನ್ನು ಒಳಗೊಂಡಿರುವ ಈ ಪರ್ವತದ ಮೇಲೆ ಆಂಜನೇಯ ನೆಲಸಿದ್ದಾನೆ. ಇನ್ನು ಸಂಜೆ ಸುಮಾರಿಗೆ ಬ ಸಚಿವರು ಜೈ ಶ್ರೀರಾಮ್ ಅಂತ ಜಪಿಸುತ್ತಾ 575 ಮೆಟ್ಟಿಲನ್ನು ಏರಿ ಆಂಜನೇಯನ ದರ್ಶನ ಪಡೆದು ಪ್ರಧಾನಿ ಮೋದಿ ಹೆಸರಲ್ಲಿ ಪೂಜೆ ಸಲ್ಲಿಸಿದರು.
ಈ ಬಳಿಕ ಬೆಟ್ಟದ ಮೇಲಿರುವ ಗುಹೆಯಲ್ಲಿ ಹತ್ತು ನಿಮಿಷಗಳ ಕಾಲ ಧ್ಯಾನಕ್ಕೆ ಕುಳಿತುಕೊಂಡರು. ತುಂಗಭದ್ರಾ ತೀರದಲ್ಲಿರುವ ಅಂಜನಾದ್ರಿ ಬೆಟ್ಟ ಇಲ್ಲಿ ಧ್ಯಾನ ಮಾಡಿದ್ರೆ ಸಕಲವು ಒಳ್ಳೆದಾಗುತ್ತೆ ಎನ್ನುವ ಪ್ರತೀತಿ ಇದೆ. ಇನ್ನೂ ಸಚಿವರ ಜೊತೆ ಸ್ಥಳೀಯ ಶಾಸಕ ಪರಣ್ಣ ಮನವಳ್ಳಿ ಸಹ ಬೆಟ್ಟ ಹತ್ತಿ ಆಂಜನೇಯ ಸ್ವಾಮಿಯ ದರ್ಶನ ಪಡೆದರು.
ಈ ಹಿಂದೆ ಮೋದಿ ಪ್ರಧಾನಿ ಆಗುವ ಮುಂಚೆ ಮೋದಿಯವರ ಪತ್ನಿ ಜಶೋಧಾ ಬೇನ್ ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡಿದ್ದರು. ಕೊಪ್ಪಳಕ್ಕೆ ಆಗಮಿಸುವ ಬಹುತೇಕ ರಾಜಕಾರಣಿಗಳು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದುಕೊಂಡು ಹೊಗ್ತಾರೆ.