ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಈ ವರ್ಷ ನಿಜಕ್ಕೂ ಸುಗ್ಗಿ..! ದಚ್ಚು ಅಭಿನಯದ ಸಾಲು–ಸಾಲು ಸಿನಿಮಾಗಳು ತೆರೆ ಕಾಣ್ತಾ ಇವೆ. ಇದೀಗ ‘ಒಡೆಯ‘ನ ದರ್ಶನಕ್ಕೂ ಡೇಟ್ ಫಿಕ್ಸ್ ಆಗಿದೆ. ‘ಕುರುಕ್ಷೇತ್ರ‘ದ ಸುಯೋಧನನ ರಾಜ್ಯಭಾರ ನಡೆಯುತ್ತಿರುವಾಗಲೇ ‘ಒಡೆಯ‘ನ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ.
ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ 2018 ತುಂಬಾ ನಿರಾಸೆಯ ವರ್ಷವಾಗಿತ್ತು. 2017ರಲ್ಲಿ ತಾರಕ್ ಸಿನಿಮಾ ರಿಲೀಸ್ ಆದ್ಮೇಲೆ ದಚ್ಚು ಅಭಿನಯದ ಒಂದೇ ಒಂದು ಸಿನಿಮಾ ಕೂಡ ತೆರೆಕಂಡಿರ್ಲಿಲ್ಲ. ಇದ್ರಿಂದ ಬೇಸರದಲ್ಲಿದ್ದ ಫ್ಯಾನ್ಸ್ಗೆ ಡಿ.ಬಾಸ್ ಈ ವರ್ಷಾರಂಭದಿಂದಲೂ ಸಿನಿ ಹಬ್ಬದೂಟ ಉಣಬಡಿಸ್ತಿದ್ದಾರೆ.
ವರ್ಷದ ಆರಂಭದಲ್ಲಿ ‘ಯಜಮಾನ‘ನಾಗಿ ದರ್ಶನ ನೀಡಿದ ಮಿ.ಐರಾವತ.. ಸದ್ಯ ‘ಕುರುಕ್ಷೇತ್ರ‘ದ ಸುಯೋಧನನಾಗಿ ಅಬ್ಬರಿಸ್ತಿದ್ದಾರೆ. ಕುರುಕ್ಷೇತ್ರ ರಿಲೀಸ್ ಬಳಿಕ ಚಾಲೆಂಜಿಂಗ್ ಸ್ಟಾರ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಖ್ಯಾತ ನಟ ತೂಗುದೀಪ್ ಶ್ರೀನಿವಾಸ್ ಅವರ ಮಗನಾಗಿದ್ದರೂ ದರ್ಶನ್ ಕಷ್ಟಪಟ್ಟು ಸ್ಯಾಂಡಲ್ವುಡ್ನಲ್ಲಿ ಈ ಮಟ್ಟಕ್ಕೆ ಬೆಳೆದವರು. ಹಂತ ಹಂತವಾಗಿ ಚಂದನವನದಲ್ಲಿ ಛಾಪು ಮೂಡಿಸ್ತಾ ಬಂದಿರುವ ದರ್ಶನ್ ಇವತ್ತು ಅಭಿಮಾನಿಗಳ ಪ್ರೀತಿಯ ‘ಚಕ್ರವರ್ತಿ‘, ಡಿ.ಬಾಸ್….
1997ರಲ್ಲೇ ಸಿನಿರಂಗಕ್ಕೆ ಎಂಟ್ರಿಕೊಟ್ಟ ದರ್ಶನ್… ಕನ್ನಡಿಗರ ಮನೆ–ಮನ ತಲುಪಲು ಕಾದಿದ್ದು ಬರೋಬ್ಬರಿ 5 ವರ್ಷ..! 2002ರಲ್ಲಿ ತೆರೆಕಂಡ ಮೆಜೆಸ್ಟಿಕ್ ಸಿನಿಮಾ ದರ್ಶನ್ಗೆ ಬಿಗ್ ಬ್ರೇಕ್ ಕೊಡ್ತು. ನಾಯಕ ನಟನಾಗಿ ದಚ್ಚು ಅಭಿನಯಿಸಿದ ಚೊಚ್ಚಲ ಸಿನಿಮಾ ಅದು. ಅಲ್ಲಿಂದ ಶುರುವಾದ ದಚ್ಚು ಸಿನಿ ಪಯಣ ಇವತ್ತು ‘ಕುರುಕ್ಷೇತ್ರ‘ದವರೆಗೆ ಬಂದಿದೆ…ಇನ್ನೂ ಸಾಲು ಸಾಲು ಸಿನಿಮಾಗಳು ಬತ್ತಳಿಕೆಯಲ್ಲಿವೆ.
ಈ ವರ್ಷ ರಿಲೀಸ್ ಆದ ಯಜಮಾನ ಸೂಪರ್ ಡೂಪರ್ ಹಿಟ್.. ಕುರುಕ್ಷೇತ್ರ ಅಬ್ಬರವನ್ನು ನೀವೇ ನೋಡ್ತಿದ್ದೀರಾ..! ಈ ಸಿನಿಮಾ 100 ಕೋಟಿ ಕಲೆಕ್ಷನ್ ದಾಟಿದ್ದು, ದರ್ಶನ್ಗೆ ಶತಕೋಟಿ ಸರ್ದಾರ ಅನ್ನೋ ಹೊಸ ಬಿರುದನ್ನು ತಂದುಕೊಟ್ಟಿದೆ ಸುಯೋಧನನ ಅವತಾರ..! ಬಾಕ್ಸ್ ಆಫೀಸಲ್ಲಿನ್ನೂ ಸುಯೋಧನನ ದರ್ಬಾರು ನಡೆಯುತ್ತಿರುವಾಗಲೇ ‘ಒಡೆಯ‘ನ ಆಗಮನಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
ದಸರಾ ಹಬ್ಬಕ್ಕೆ ಒಡೆಯನ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ದಚ್ಚು ಮೈಸೂರಿನವರಾಗಿದ್ದು, ಅದ್ಧೂರಿ ದಸರಾ ಸಂಭ್ರಮದಲ್ಲೇ ಒಡೆಯನ ಟೀಸರನ್ನು ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗ್ತಿದ್ದು, ಅಭಿಮಾನಿಗಳ ಕುತೂಹಲ ಗರಿ ಗೆದರಿದೆ.
ಇನ್ನು ಟೀಸರ್ ಬೆನ್ನಲ್ಲೇ ಟ್ರೈಲರ್ ಕೂಡ ಲಾಂಚ್ ಮಾಡಲಿರುವ ಚಿತ್ರತಂಡ ಇದೇ ವರ್ಷ ಸಿನಿಮಾ ರಿಲೀಸ್ ಮಾಡೋ ಯೋಜನೆಯನ್ನೂ ಹಾಕಿಕೊಂಡಿದೆ. ಚಿತ್ರೀಕರಣ ಬಹುತೇಕ ಕಂಪ್ಲೀಟ್ ಆಗಿದ್ದು, ದರ್ಶನ್ ತಮ್ಮ ಭಾಗದ ಡಬ್ಬಿಂಗ್ ಕೂಡ ಮುಗಿಸಿದ್ದಾರೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಅದನ್ನು ಸ್ಜಿಜರ್ಲೆಂಡ್ನಲ್ಲಿ ಶೂಟ್ ಮಾಡಲು ಡೈರೆಕ್ಟರ್ ಎಂ.ಡಿ ಶ್ರೀಧರ್ ಯೋಚಿಸಿದ್ದಾರೆ.
ಎಲ್ಲಾ ಅಂದುಕೊಂಡಂತೆ ನಡೆದ್ರೆ ನವೆಂಬರ್ನಲ್ಲಿ ಕನ್ನಡ ರಾಜ್ಯೋತ್ಸವದ ಸಡಗರದಲ್ಲೇ ‘ಒಡೆಯ’ನ ಅಬ್ಬರ ಶುರುವಾಗಲಿದೆ. ನವೆಂಬರ್ನಲ್ಲಿ ಒಡೆಯನ ದರ್ಶನ ಮಾಡಿಸಲು ಚಿತ್ರತಂಡ ಹಗಲಿರುಳು ಶ್ರಮಿಸ್ತಿದೆ. ಒಡೆಯ ನವೆಂಬರ್ಗೆ ಥಿಯೇಟರ್ಗೆ ಲಗ್ಗೆ ಇಟ್ಟರೆ ಈ ವರ್ಷ ದರ್ಶನ್ ಅಭಿನಯದ ಮೂರು ಸಿನಿಮಾಗಳು ತೆರೆಕಂಡಂತಾಗುತ್ತದೆ. ವರ್ಷಾರಂಭದಲ್ಲಿ ಯಜಮಾನ, ವರ್ಷದ ಮಧ್ಯಭಾಗದಲ್ಲೀಗ ಕುರುಕ್ಷೇತ್ರದ ಸುಯೋಧನನ ದರ್ಶನ ಭಾಗ್ಯ ಸಿಕ್ಕಂತೆ, ವರ್ಷದ ಕೊನೆಯಲ್ಲಿ ಒಡೆಯನ ದರ್ಶನ ಸಿಗಲಿದೆ. ಈ ಬಗ್ಗೆ ಶೀಘ್ರದಲ್ಲೇ ‘ಒಡೆಯ’ ಟೀಮ್ನಿಂದ ಅಧಿಕೃತ ಮಾಹಿತಿ ಬರಲಿದೆ.