Friday, November 22, 2024

ಇಂಡೋ-ವಿಂಡೀಸ್​ ಸೆಕೆಂಡ್​ ಟೆಸ್ಟ್ – ವೈಟ್​ ವಾಷ್ ಭೀತಿಯಲ್ಲಿ ಕೆರಬಿಯನ್ನರು..!

ಕಿಂಗ್​ಸ್ಟನ್​ (ಜುಮೈಕಾ) : ವಿಶ್ವಕಪ್​ ಬಳಿಕ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಟಿ20, ಒಡಿಐ ಸರಣಿಯನ್ನು ಅಧಿಕೃತವಾಗಿ ಗೆದ್ದಿದ್ದು, ಇಂದಿನಿಂದ ಆರಂಭವಾಗುವ ಎರಡನೇ ಟೆಸ್ಟ್​ ಮ್ಯಾಚ್​ನಲ್ಲೂ ಅತಿಥೇಯ ವೆಸ್ಟ್ ಇಂಡೀಸ್ ಅನ್ನು ಬಗ್ಗು ಬಡಿಯುವ ತವಕದಲ್ಲಿದೆ. ಈಗಾಗಲೇ ಮೊದಲ ಟೆಸ್ಟ್​ನಲ್ಲಿ ಸೋಲುಂಡಿರುವ ಕೆರಬಿಯನ್ನರು ವೈಟ್​ವಾಷ್ ಭೀತಿಯಲ್ಲಿದ್ದಾರೆ.
ಕಿಂಗ್​ ಸ್ಟನ್​ನ ಸಬಿನಾ ಪಾರ್ಕ್​ ಸ್ಟೇಡಿಯಂನಲ್ಲಿ ಇಂದಿನಿಂದ ಎರಡನೇ ಟೆಸ್ಟ್​ ಆರಂಭವಾಗುತ್ತಿದೆ. ವಿರಾಟ್​ ಕೊಹ್ಲಿ ಪಡೆಗೆ ಮುಖ್ಯವಾಗಿ ಆರಂಭಿಕ ಜೋಡಿಯದ್ದೇ ದೊಡ್ಡ ತಲೆನೋವಾಗಿದೆ. ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್​​ವಾಲ್​ ಫಸ್ಟ್ ಟೆಸ್ಟ್​ನಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಅವರಿಬ್ಬರೂ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾಗಿದ್ದರು. ಮೊದಲ ಇನ್ನಿಂಗ್ಸ್​​ನಲ್ಲಿ ಕೇವಲ 5ರನ್​ ಜೊತೆಯಾಟ ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 30ರನ್ ಜೊತೆಯಾಟ ಮಾತ್ರ ಈ ಜೋಡಿಯಿಂದ ಬಂದಿತ್ತು. ವೈಯಕ್ತಿಕವಾಗಿಯೂ ಹೆಚ್ಚು ರನ್ ಗಳಿಸಲು ಇಬ್ಬರೂ ಎಡವಿದ್ದರು.
ಟೆಸ್ಟ್​ನಲ್ಲಿ ವಿರಾಟ್​ ಕೊಹ್ಲಿ ಪಡೆಗೆ ಆರಂಭಿಕ ಜೋಡಿಯ ತಲೆ ನೋವು ಈ ಸರಣಿಯಲ್ಲಿ ಮಾತ್ರವಲ್ಲ. 2018ರ ಡಿಸೆಂಬರ್​​ನಲ್ಲಿ ನಡೆದ ಟೆಸ್ಟ್​ನಲ್ಲಿ ಹನುಮ ವಿಹಾರಿ ಮತ್ತು ಮಯಾಂಕ್ ಅಗರ್​ವಾಲ್ ಅವರನ್ನು ಓಪನಿಂಗ್ ಕಳುಹಿಸಲಾಗಿತ್ತು. ಆ ಪ್ರಯೋಗ ಕ್ಲಿಕ್ ಆಗಿರಲಿಲ್ಲ. ಪರ್ತ್​ ಟೆಸ್ಟ್​ನಲ್ಲಿ ಕೆ.ಎಲ್ ರಾಹುಲ್ ಮತ್ತು ಮುರಳಿ ವಿಜಯ್ ಇನ್ನಿಂಗ್ಸ್ ಆರಂಭಿಸಿದ್ರು. ಈ ಜೋಡಿ ಕೂಡ ನಿರೀಕ್ಷಿತ ಪ್ರದರ್ಶನ ನೀಡಿರ್ಲಿಲ್ಲ.
ಇನ್ನು ಇಂದಿನಿಂದ ಆರಂಭವಾಗುವ ಟೆಸ್ಟ್ ಬಗ್ಗೆ ಗಮನಿಸುವುದಾದರೆ ರಾಹುಲ್, ಅಗರ್​ವಾಲ್ ಅಥವಾ ಪಂತ್​ ಕೂರಿಸಿ ರೋಹಿತ್ ಶರ್ಮಾ ಅವರನ್ನು ಕಣಕ್ಕಿಳಿಸಬಹುದು. ಪಂತ್​ ಅವರನ್ನು ಹೊರಗಿಟ್ಟು ವೃದ್ಧಿಮಾನ್ ಸಾಹಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಪಂತ್ ಬದಲು ರೋಹಿತ್ ಶರ್ಮಾ ಕಣಕ್ಕಿಳಿದರೆ ಕನ್ನಡಿಗ ಕೆ.ಎಲ್​ ರಾಹುಲ್​ಗೆ ವಿಕೆಟ್​ ಕೀಪಿಂಗ್ ಹೊಣೆ ಹೆಚ್ಚುವರಿಯಾಗಿ ಹೆಗಲೇರಲಿದೆ.
ಟೀಮ್ ಇಂಡಿಯಾವೇ ಗೆಲ್ಲುವ ನೆಚ್ಚಿನ ತಂಡ ಎನಿಸಿದರೂ ಜೇಸನ್ ಹೋಲ್ಡರ್ ನೇತೃತ್ವದ ವಿಂಡೀಸ್​ ಗಾಯಗೊಂಡಿರುವ ಹುಲಿಗಳಂತಿದ್ದು.. ಈ ಟೆಸ್ಟ್​ನಲ್ಲಾದರೂ ಗೆಲ್ಲಬೇಕೆಂಬ ಹಠದಲ್ಲಿದೆ. ಭಾರತ ಕೆರಬಿಯನ್ನರನ್ನಂತೂ ಲಘುವಾಗಿ ಪರಿಗಣಿಸುವಂತಿಲ್ಲ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8ಗಂಟೆಗೆ ಪಂದ್ಯ ಆರಂಭವಾಗಲಿದೆ.

ತಂಡಗಳು ಇಂತಿವೆ
ಭಾರತ : ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪ ನಾಯಕ), ಮಯಾಂಕ್ ಅಗರ್ ವಾಲ್, ಕೆ.ಎಲ್ ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರೋಹಿತ್ ಶರ್ಮಾ, ರಿಷಬ್ ಪಂತ್, ವೃದ್ಧಿಮಾನ್ ಸಾಹ, ರವಿಚಂದ್ರನ್ ಅಶ್ವಿನ್, ಜಡೇಜಾ, ಕುಲ್ದೀಪ್​ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್​ ಶಮಿ, ಜಸ್​ಪ್ರೀತ್ ಬುಮ್ರಾ, ಉಮೇಶ್ ಯಾದವ್.

ವೆಸ್ಟ್ ಇಂಡೀಸ್
ಜೇಸನ್ ಹೋಲ್ಡರ್ (ನಾಯಕ), ಕ್ರೇಗ್​ ಬ್ರಾತ್ ವೇಟ್, ಡರೇನ್ ಬ್ರಾವೊ, ಶಮಾರ್ ಬ್ರೂಕ್ಸ್, ಜಾನ್​ ಕ್ಯಾಂಬೆಲ್, ರಾಸ್ಟನ್​ ಚೇಸ್, ರಖೀಮ್ ಕಾರ್ನ್ ವಾಲ್, ಜಹ್​ಮರ್ ಹ್ಯಾಮಿಲ್ಟನ್, ಶ್ಯಾನನ್ ಗ್ಯಾಬ್ರಿಯಲ್, ಶಿಮ್ರಾನ್ ಹೆಟ್ಮಾಯರ್, ಶಾಯ್ ಹೋಪ್, ಕಿಮೊ ಪಾಲ್, ಕೆಮರ್ ರೋಚ್.

RELATED ARTICLES

Related Articles

TRENDING ARTICLES