ನವದೆಹಲಿ: ಭಾರತ ಕ್ರಿಕೆಟ್ಗೆ ಹೊಸ ಭಾಷ್ಯವನ್ನು ಬರೆದವರು ಮಾಜಿ ನಾಯಕ ಎಂ.ಎಸ್ ಧೋನಿ. ಇವರ ಕ್ಯಾಪ್ಟನ್ಸಿಯಲ್ಲೇ ಟೀಮ್ ಇಂಡಿಯಾ ಟಿ-20, ಏಕದಿನ ವಿಶ್ವಕಪ್ ಗೆದ್ದಿರೋದು ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ನಂ.1 ಸ್ಥಾನ ಅಲಂಕರಿಸಿದ್ದು. ಕ್ರಿಕೆಟ್ ವರ್ಲ್ಡ್ನಲ್ಲಿ ಬೆಸ್ಟ್ ಗೇಮ್ ಫಿನಿಶರ್ ಅಂತ ಕರೆಸಿಕೊಂಡಿರೋ ಎಂ.ಎಸ್ ಧೋನಿ ಸದ್ಯ ಫಾರ್ಮ್ ಕಳೆದುಕೊಂಡು ತಂಡದಿಂದ ಹೊರಗುಳಿಯುವಂತಾಗಿದೆ!
ಹೌದು. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಆಯ್ಕೆ ಸಮಿತಿ ಧೋನಿಯವರನ್ನು ಟೀಮ್ನಿಂದ ಕೈಬಿಡಲು ನಿರ್ಧರಿಸಿರುವುದೇ ಇದಕ್ಕೆ ಸಾಕ್ಷಿ.! ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಕೈಗೊಂಡ ವೆಸ್ಟ್ ಇಂಡೀಸ್ ಟೂರ್ನಲ್ಲೂ ಎಂ.ಎಸ್. ಧೋನಿ ಭಾಗವಹಿಸಿಲ್ಲ. ಈ ವೇಳೆ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ತೆರಳಿದ ಧೋನಿ ಬದಲಿಗೆ ರಿಷಬ್ ಪಂತ್ ಕೀಪಿಂಗ್ ಹೊಣೆ ಹೊತ್ತಿದ್ರು. ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಒಂದು ಟೆಸ್ಟ್ ಪಂದ್ಯ ಬಾಕಿಯಿದೆ. ಅದಾದ ಬಳಿಕ ಟೀಮ್ ಇಂಡಿಯಾ ಸೆಪ್ಟೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ.20 ಹಾಗೂ ಟೆಸ್ಟ್ ಸರಣಿ ಆಡಲಿದೆ. ಟೆಸ್ಟ್ ಕ್ರಿಕೆಟ್ಗೆ ಈ ಹಿಂದೆಯೇ ನಿವೃತ್ತಿ ಘೋಷಿಸಿರುವ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಆಡ್ತಾರೆ ಎಂದು ಊಹಿಸಲಾಗಿತ್ತು. ಅವರ ಅಭಿಮಾನಿಗಳು ಕೂಡ ಈ ಕ್ಷಣಕ್ಕಾಗಿ ಕಾಯ್ತಾ ಇದ್ರು. ಆದ್ರೆ, ಆಯ್ಕೆ ಸಮಿತಿ ಧೋನಿಯವರನ್ನು ತಂಡದಿಂದ ಹೊರಗಿಡುವ ಸಾಧ್ಯತೆ ದಟ್ಟವಾಗಿದೆ. ಮುಂಬರುವ ಟಿ-20 ವಿಶ್ವಕಪ್ ದೃಷ್ಟಿಯಿಂದ ರಿಷಬ್ ಪಂತ್ಗೆ ಆಯ್ಕೆ ಸಮಿತಿ ಮಣೆ ಹಾಕುವ ಚಾನ್ಸ್ ಇದೆ. ರಿಷಬ್ ಪಂತ್ ಕೂಡ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಎಡವುತ್ತಿದ್ರೆ, ಅವರ ಜೊತೆಗೆ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶಾನ್ ಅವಕಾಶಕ್ಕಾಗಿ ಕಾಯ್ತಾ ಇದ್ದಾರೆ. ಒಂದೆಡೆ ಧೋನಿಯವರು ಕೂಡ ಅವರ ಈ ಹಿಂದಿನ ಫಾರ್ಮ್ನಲ್ಲಿಲ್ಲ. ಇನ್ನೊಂದೆಡೆ ರಿಷಬ್ ಪಂತ್, ಸಂಜು ಸ್ಯಾಮ್ಸನ್, ಇಶಾನ್ ಕಿಶಾನ್ ಜೊತೆ ಧೋನಿ ಬ್ಯಾಟಿಂಗ್ ಹಾಗೂ ಕೀಪಿಂಗ್ನಲ್ಲಿ ಸ್ಪರ್ಧಿಸಬೇಕಾಗಿದೆ. ಹೀಗಾಗಿ ವರ್ಲ್ಡ್ಕಪ್ಗೆ ಬಲಿಷ್ಠ ಟೀಮ್ ಕಟ್ಟುವ ನಿಟ್ಟಿನಲ್ಲಿ ಧೋನಿಯವರನ್ನು ಟೀಮ್ಗೆ ಸೇರಿಸಿಕೊಳ್ಳುವ ಆಸಕ್ತಿಯನ್ನು ಆಯ್ಕೆ ಸಮಿತಿ ತೋರಿಸ್ತಿಲ್ಲ.
ಇತ್ತ ಧೋನಿಯವರ ನಿವೃತ್ತಿಯ ಮಾತು ಕೂಡ ಜೋರಾಗಿಯೇ ಕೇಳಿ ಬರ್ತಿದೆ. ಮಾಜಿ ಆಟಗಾರರು ಕೂಡ ಧೋನಿ ನಿವೃತ್ತಿಗೆ ಇದು ಸಕಾಲ ಎಂದು ಅಭಿಪ್ರಾಯಪಡ್ತಿದ್ದಾರೆ. ದ.ಆಫ್ರಿಕಾ ವಿರುದ್ಧದ ಸರಣಿಯ ನಂತರ ಟೀಮ್ ಇಂಡಿಯಾ ನವೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ಟಿ-20 ಪಂದ್ಯವನ್ನಾಡಲಿದೆ. ಈ ಸಂದರ್ಭದಲ್ಲಿ ಧೋನಿ ಕ್ರಿಕೆಟ್ ಭವಿಷ್ಯ ನಿರ್ಧಾರವಾಗುವ ಸಾಧ್ಯತೆಯಿದೆ. ಟಿ-20 ವರ್ಲ್ಡ್ಕಪ್ವರೆಗೆ ಆಡ್ತಾರೋ ಅಥವಾ ಬಾಂಗ್ಲಾದೇಶ ವಿರುದ್ಧದ ಸರಣಿ ಧೋನಿ ನಿವೃತ್ತಿಗೆ ವೇದಿಕೆಯಾಗುತ್ತಾ ಎಂದು ಕಾದು ನೋಡಬೇಕಾಗಿದೆ.