ನವದೆಹಲಿ: ಇಂದು ಹಿರಿಯ ರಾಜಕೀಯ ಮುತ್ಸದ್ಧಿ ಅರುಣ್ ಜೇಟ್ಲಿಯವರನ್ನು ಭಾರತ ದೇಶ ಕಳೆದುಕೊಂಡಿದೆ. ತೀವ್ರ ಅನಾರೋಗ್ಯದಿಂದ ಅವರು ಇಂದು ಏಮ್ಸ್ ಆಸ್ಪತ್ರೆಯಲ್ಲಿ ಅಸ್ತಂಗತರಾದ್ರು. ಸಜ್ಜನ ರಾಜಕಾರಣಿಯಾಗಿದ್ದ ಅವರು ಬಿಜೆಪಿಯಲ್ಲಿ ಮಾತ್ರವಲ್ಲದೇ ಇತರ ಪಕ್ಷಗಳಲ್ಲೂ ತಮ್ಮ ಸ್ನೇಹಿತರನ್ನು, ಅಭಿಮಾನಿಗಳನ್ನು ಹೊಂದಿದ್ರು. ಎಂತಹ ಕಠಿಣ ಪರಿಸ್ಥಿಯನ್ನೂ ನಿಭಾಯಿಸುವ ಅವರ ಗುಣ ಎಲ್ಲರಿಗೂ ಮಾದರಿಯಾಗಿತ್ತು. ಇನ್ನು ಅರುಣ್ ಜೇಟ್ಲಿಯವರ ನಾಯಕತ್ವ ಗುಣ, ರಾಜಕೀಯ ಚಾಣಕ್ಷತೆ ಎಲ್ಲರಿಗೂ ತಿಳಿದಿರೋ ವಿಚಾರ. ಆದ್ರೆ ಅವರಿಗೂ ಇಂಡಿಯನ್ ಕ್ರಿಕೆಟರ್ಸ್ಗೂ ಅವಿನಾಭಾವ ಸಂಬಂಧವಿದೆ. ಅದ್ರಲ್ಲೂ ವಿರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಆಶಿಶ್ ನೆಹ್ರಾರಿಗೆ ಧೈರ್ಯ ತುಂಬಿದ್ದೇ ಅರುಣ್ ಜೇಟ್ಲಿಯವರು.
ಹೌದು. ಅಚ್ಚರಿಯಾದ್ರೂ ಇದು ಸತ್ಯ. 1999 ರಿಂದ 2012 ರವರೆಗೆ ಅರುಣ್ ಜೇಟ್ಲಿಯವರು ದೆಹಲಿ ಕ್ರಿಕೆಟ್ ಅಸೋಸಿಯೇಶನ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ರು. ತಮ್ಮ 13 ವರ್ಷಗಳ ಸೇವಾವಧಿಯಲ್ಲಿ ಜೇಟ್ಲಿಯವರು ಅಪಾರ ಕೊಡುಗೆಗಳನ್ನು ನೀಡಿದ್ರು. ದೆಹಲಿಯ ಯುವ ಆಟಗಾರರ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಪ್ರತಿಭೆ ಬೆಳಗುವಂತೆ ಜೇಟ್ಲಿಯವರು ಮಾಡಿದ್ರು. ಇಶಾಂತ್ ಶರ್ಮಾ, ಆಶೀಶ್ ನೆಹ್ರಾರಂತಹ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಿದ್ದೇ ಇವರ ಕಾಲದಲ್ಲಿ. ಅದರಲ್ಲೂ ಆಶೀಶ್ ನೆಹ್ರಾರವರು ಗಾಯಗೊಂಡಿದ್ದ ವೇಳೆ ಅವರ ಆಸ್ಪತ್ರೆ ಖರ್ಚನ್ನೂ ಜೇಟ್ಲಿಯವರು ಭರಿಸಿದ್ರಂತೆ.
ಇನ್ನು ವಿಶೇಷವೆಂದರೇ, ಭಾರತದ ಮಾಜಿ ಓಪನರ್ ವಿರೇಂದ್ರ ಸೆಹ್ವಾಗ್ರವರು ತಮ್ಮ ಜೀವನದಲ್ಲಿ ಅರುಣ್ ಜೇಟ್ಲಿಯವರಿಗೆ ವಿಶೇಷ ಸ್ಥಾನ ನೀಡಿದ್ದಾರೆ. ಒಂದು ಕಾಲದಲ್ಲಿ ಸೆಹ್ವಾಗ್ ದೆಲ್ಲಿ ತಂಡವನ್ನು ತೊರೆದು ಹರಿಯಾಣ ತಂಡವನ್ನು ಸೇರುವ ನಿರ್ಧಾರ ಮಾಡಿದ್ರು. ಆ ಸಂದರ್ಭದಲ್ಲಿ ಸ್ವತಃ ಅರುಣ್ ಜೇಟ್ಲಿಯವರೇ ಸೆಹ್ವಾಗ್ರವರ ಮನೆಗೆ ಆಗಮಿಸಿ ತಮ್ಮ ನಿರ್ಧಾರವನ್ನು ಹಿಂತೆಗೆದೆಕೊಳ್ಳುವಂತೆ ಮನವಿ ಮಾಡಿದ ಬಳಿಕ ಸೆಹ್ವಾಗ್ರವರು ಅವರ ನಿರ್ಧಾರವನ್ನು ಬದಲಾಯಿಸಿದ್ರು. ಇಂದು ಜೇಟ್ಲಿಯವರು ವಿಧಿವಶರಾದಾಗ ವಿರೇಂದ್ರ ಸೆಹ್ವಾಗ್ ಟ್ವೀಟ್ ಮೂಲಕ ತೀವ್ರ ಸಂತಾಪ ಸೂಚಿಸಿದ್ದಾರೆ. ಅರುಣ್ ಜೇಟ್ಲಿ ಅವರ ನಿಧನ ನನಗೆ ತುಂಬಾ ನೋವು ತಂದಿದೆ. ದೆಹಲಿ ಮತ್ತು ದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರ. ಡಿಡಿಸಿಎ ಚೇರ್ಮನ್ ಕೂಡ ಆಗಿದ್ದ ಅವರು ಕ್ರಿಕೆಟಿಗರನ್ನು ಪ್ರೋತ್ಸಾಹಿಸುತ್ತಿದ್ರು. ಆಟಗಾರರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುತ್ತಿದ್ರು ಎಂದು ಸೆಹ್ವಾಗ್ ಜೇಟ್ಲಿಯವ್ರನ್ನು ಸ್ಮರಿಸಿಕೊಂಡ್ರು.
ಅರುಣ್ ಜೇಟ್ಲಿಯವರು ಭಾರತೀಯ ಕ್ರಿಕೆಟ್ಗೆ ಮಹಾನ್ ಪ್ರತಿಭೆಗಳನ್ನು ನೀಡಿದ್ದಾರೆ. ಅದ್ರಲ್ಲಿ ವಿರಾಟ್ ಕೊಹ್ಲಿ ಪ್ರಮುಖರು. ಕೊಹ್ಲಿಯವರ ಕ್ರಿಕೆಟ್ ಕರಿಯರ್ನಲ್ಲಿ ಮಹತ್ವದ ಪಾತ್ರವನ್ನು ಅರುಣ್ ಜೇಟ್ಲಿ ವಹಿಸಿದ್ರು. ಜ್ಯೂನಿಯರ್ ವಿಭಾಗದಲ್ಲಿ ಆಡುವಾಗ ತಂದೆಯನ್ನು ಕಳೆದುಕೊಂಡಿದ್ದ ವಿರಾಟ್ ಕೊಹ್ಲಿಗೆ ಆಗ ಡಿಡಿಸಿಎ ಚೇರ್ಮನ್ ಆಗಿದ್ದ ಅರುಣ್ ಜೇಟ್ಲಿ ಅವರಿಂದ ಪ್ರೋತ್ಸಾಹ ಸಿಕ್ಕಿತ್ತು ಎಂದು ಸ್ವತಃ ವಿರಾಟ್ ಕೊಹ್ಲಿಯವ್ರೇ ಹಿಂದೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
ದೆಹಲಿ ಕ್ರಿಕೆಟ್ ಅಸೋಸಿಯೇಶನ್ನಲ್ಲಿ ಆಡಿದ ನಿವೃತ್ತ ಆಟಗಾರರಿಗೆ ಪೆನ್ಶನ್ ನೀಡೋ ಯೋಜನೆಯನ್ನು ಕೂಡ ಅವರು ಪ್ರಾರಂಭಿಸಿದ್ರು. ಜೇಟ್ಲಿಯವರು ಇಂದು ನಿಧನರಾದಾಗ ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ, ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್,ಸುರೇಶ್ ರೈನಾ ಸೇರಿದಂತೆ ಹಲವಾರು ಆಟಗಾರರು ಸಂತಾಪ ವ್ಯಕ್ತಪಡಿಸಿದ್ರು. ರಾಜಕಾರಣಿಯಾಗಿ ಮಾತ್ರವಲ್ಲದೇ ಕ್ರಿಕೆಟ್ ಕ್ಷೇತ್ರದಲ್ಲೂ ಅವರು ತಮ್ಮ ಗಣನೀಯ ಸೇವೆಯನ್ನು ಸಲ್ಲಿಸಿದ್ರು. ಹೀಗೆ ಭಾರತೀಯ ಕ್ರಿಕೆಟ್ಗೆ ಅಪಾರ ಕೊಡುಗೆ ನೀಡಿದ್ದ ಅರುಣ್ ಜೇಟ್ಲಿಯವರು ಇನ್ನು ನೆನಪು ಮಾತ್ರ.