ಬೆಂಗಳೂರು: ಅತೀ ವೇಗದ ಶತಕ..ಅತೀ ಹೆಚ್ಚು ಸಿಕ್ಸರ್ಸ್..ಅತೀ ಹೆಚ್ಚು ವೈಯಕ್ತಿಕ ಸ್ಕೋರ್..ಅತೀ ಹೆಚ್ಚು ವಿಕೆಟ್.. ಇದು ಕರ್ನಾಟಕ ಪ್ರೀಮಿಯರ್ ಲೀಗ್ನ 15 ನೇ ಪಂದ್ಯದಲ್ಲಿ ದಾಖಲಾದ ರೆಕಾರ್ಡ್ಸ್.. ವಿಶೇಷವೆಂದರೇ, ಈ ಎಲ್ಲಾ ದಾಖಲೆಗಳಿಗೆ ಕಾರಣಕರ್ತರಾಗಿದ್ದು ಒಬ್ಬನೇ ಆಟಗಾರ ಅದೂ ಕನ್ನಡಿಗ ಕೃಷ್ಣಪ್ಪ ಗೌತಮ್. ಈ ಮೂಲಕ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸ್ಫೋಟಕ ಆಟವಾಡಿದ ಕೃಷ್ಣಪ್ಪ ಗೌತಮ್ ಟಿ-20ಯಲ್ಲಿ ಇತಿಹಾಸ ರಚಿಸಿದ್ರು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಬಳ್ಳಾರಿ ಟಸ್ಕರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ನಡುವಿನ ಪಂದ್ಯ ಗೌತಮ್ ಪರಾಕ್ರಮಕ್ಕೆ ಸಾಕ್ಷಿಯಾಗಿದೆ. ಟಾಸ್ ಗೆದ್ದ ಬಳ್ಳಾರಿ ಟಸ್ಕರ್ಸ್ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಒನ್ಡೌನ್ ಬ್ಯಾಟ್ಸ್ಮನ್ ಆಗಿ ಕಣಕ್ಕೆ ಇಳಿದ ಕೆ.ಗೌತಮ್ ಕೇವಲ 56 ಎಸೆತಗಳಲ್ಲಿ 13 ಭರ್ಜರಿ ಸಿಕ್ಸರ್, 7 ಬೌಂಡರಿ ಸಮೇತ 134 ರನ್ ಗಳಿಸಿ ಅಜೇಯರಾಗಿ ಉಳಿದ್ರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನಟ್ಟಿದ ಗೌತಮ್ ಶಿವಮೊಗ್ಗ ಬೌಲರ್ಗಳನ್ನು ಬೆಂಡೆತ್ತಿದ್ರು. ನಡುವೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ರಿಂದ ಪಂದ್ಯವನ್ನು 17 ಓವರಿಗೆ ಕಡಿತಗೊಳಿಸಲಾಯಿತು. ಆದ್ರೆ ಆ ವೇಳೆಗಾಗ್ಲೆ ಬಳ್ಳಾರಿ 203 ರನ್ನ್ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು.
ಇನ್ನು ಈ ಗುರಿಯನ್ನು ಬೆಂಬೆತ್ತಿದ ಶಿವಮೊಗ್ಗ ತಂಡಕ್ಕೆ ಕೆ. ಗೌತಮ್ ಬೌಲಿಂಗ್ನಲ್ಲೂ ಸಿಂಹಸ್ವಪ್ನರಾಗಿ ಕಾಡಿದ್ರು. ಆರಂಭದಿಂದಲೇ ಮಾರಕವಾಗಿ ಪರಿಣಮಿಸಿದ ಅವ್ರು 4 ಓವರ್ಗಳಲ್ಲಿ 15 ರನ್ ನೀಡಿ 8 ವಿಕೆಟ್ಗಳನ್ನು ಪಡೆದ್ರು. ಗೌತಮ್ ಬೌಲಿಂಗ್ಗೆ ತತ್ತರಿಸಿದ ಶಿವಮೊಗ್ಗ ತಂಡ 16.3 ಓವರ್ಗೆ 133 ರನ್ಗೆ ಆಲೌಟ್ ಆಯಿತು.
ಇನ್ನು ಈ ಪಂದ್ಯದಲ್ಲಿ 39 ಎಸೆತಗಳಿಗೆ ಶತಕ ಬಾರಿಸಿದ ಕೆ.ಗೌತಮ್ ಕೆಪಿಎಲ್ ಇತಿಹಾಸದಲ್ಲೇ ಅತೀ ವೇಗದ ಶತಕ ಬಾರಿಸಿದ ಕೀರ್ತಿಗೆ ಪಾತ್ರರಾದ್ರು. ಅಲ್ಲದೇ, ಅತೀ ಹೆಚ್ಚು ಸಿಕ್ಸರ್ಸ್(13), ಅತೀ ಹೆಚ್ಚು ವೈಯಕ್ತಿಕ ಸ್ಕೋರ್(134), ಹಾಗೂ ಜೊತೆಗೆ 8 ವಿಕೆಟ್ಗಳನ್ನು ಪಡೆದ ಗೌತಮ್ ಆಲೌಂಡರ್ ಆಟದ ಮೂಲಕ ಟಿ.20ಯಲ್ಲಿ ಇತಿಹಾಸ ಬರೆದ್ರು.