ಲಡಾಖ್: ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದಿರುವ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸದ್ಯ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಇನ್ನು ಸೇನೆಯ ಲೆಫ್ಟಿನೆಂಟ್ ಕರ್ನಲ್ ಆಗಿರುವ ಧೋನಿಯವರು ಇಂದು 73ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಲಡಾಖ್ನ ಲೇಹ್ನಲ್ಲಿ ಧ್ವಜಾರೋಹಣ ಮಾಡಿದ್ದಾರೆ.
2011ರ ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಧೋನಿಯವರನ್ನು ಭಾರತೀಯ ಸೇನೆ ಲೆಫ್ಟಿನೆಂಟ್ ಕರ್ನಲ್ ಸ್ಥಾನ ನೀಡಿ ಗೌರವಿಸಿತ್ತು. 2019ರ ವಿಶ್ವಕಪ್ ನಂತರದ ವೆಸ್ಟ್ ಇಂಡೀಸ್ ಸರಣಿಯಿಂದ ವಿಶ್ರಾಂತಿ ಬಯಸಿದ ಧೋನಿಯವರು ಜುಲೈ 31ರಂದು 106 ಟಿಎ ಬೆಟಾಲಿಯನ್ ಜೊತೆ ಸೇರಿ ದೇಶಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಧೋನಿಯವರು ಸಿಯಾಚಿನ್ಗೆ ತೆರಳಲಿದ್ದು ಆ ಬಳಿಕ ಧೋನಿಯವರ ಸೇವೆ ಅಂತ್ಯಗೊಳ್ಳಲಿದೆ. ಕೆಲದಿನಗಳ ಹಿಂದಷ್ಟೇ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲ್ಪಟ್ಟಿರುವ ಲಡಾಖ್ನ ಲೇಹ್ ಪ್ರದೇಶದಲ್ಲಿ ಧ್ವಜಾರೋಹಣ ಮಾಡಿದ ಬಳಿಕ ಧೋನಿ ಆರ್ಮಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದರು.