ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಕುರುಕ್ಷೇತ್ರ’ ರಿಲೀಸ್ ಆಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಿರೀಕ್ಷೆಗೂ ಮೀರಿ ‘ಸುಯೋಧನ’ ಅವತಾರದಲ್ಲಿ ದಚ್ಚು ಅಬ್ಬರಿಸಿದ್ದಾರೆ. ಹಾಗಾದ್ರೆ ಕುರುಕ್ಷೇತ್ರ ಹೇಗಿದೆ? ಫ್ಯಾನ್ಸ್ ಸಂಭ್ರಮ ಹೇಗುಂಟು ಅನ್ನೋದನ್ನು ನೋಡ್ಲೇ ಬೇಕಲ್ವಾ? ಇಲ್ಲಿದೆ ‘ಕುರುಕ್ಷೇತ್ರ’ದ ಪಕ್ಕಾ ರಿವ್ಯೂ..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ ಮಾತ್ರವಲ್ಲ.. ಚಂದನವನದ ‘ ಚಕ್ರವರ್ತಿ’ ದಚ್ಚು ನ್ಯಾಷನಲ್ ಸ್ಟಾರ್…! ಕನ್ನಡ ಚಿತ್ರರಂಗದಾಚೆಗೂ ದಚ್ಚು ಎಂಟ್ರಿ ಕೊಟ್ಟಾಯ್ತು..! ಇನ್ನೇನೆ ಇದ್ರು ಕುರುಕ್ಷೇತ್ರದ ಸುಯೋಧನನದ್ದೇ ದರ್ಬಾರ್..!
ಯೆಸ್, ಸೆಟ್ಟೇರಿದಲ್ಲಿಂದಲೂ ಸಿಕ್ಕಾಪಟ್ಟೆ ಸೌಂಡು ಮಾಡ್ತಿದ್ದ ‘ಕುರುಕ್ಷೇತ್ರ’ ರಿಲೀಸ್ ಆಗಿದೆ. ಬಹು ದಿನಗಳಿಂದ ಕಾಯ್ತಿದ್ದ ದರ್ಶನ್ ಫ್ಯಾನ್ಸ್ ಅಂತೂ ತಮ್ಮ ನೆಚ್ಚಿನ ಸ್ಟಾರ ಡಿ.ಬಾಸ್ ಅವರನ್ನು ಸುಯೋಧನ ಅಲಿಯಾಸ್ ದುರ್ಯೋಧನನ ಗೆಟಪ್ನಲ್ಲಿ ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ. ಗುರುವಾರ ತಡ ರಾತ್ರಿಯಿಂದಲೇ ಕುರುಕ್ಷೇತ್ರ ಅಬ್ಬರ ಶುರುವಾಗಿದ್ದು, ಎಲ್ಲಾ ಥಿಯೇಟರ್ಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
2012ರಲ್ಲಿ ತೆರೆಕಂಡ ಐತಿಹಾಸಿಕ ಸಿನಿಮಾ ‘ಸಂಗೊಳ್ಳಿ ರಾಯಣ್ಣ’ ಬಳಿಕ ದರ್ಶನ್ ಸಿನಿ ಜರ್ನಿಯಲ್ಲಿ ‘ಕುರುಕ್ಷೇತ್ರ’ ಬಹು ದೊಡ್ಡ ಮೈಲುಗಲ್ಲು. ಸಂಗೊಳ್ಳಿ ರಾಯಣ್ಣ ಬಂದ ಬಳಿಕ ನಾವು-ನೀವ್ಯಾರು ಕಣ್ಣಾರೆ ನೋಡಿರದ ಸಂಗೊಳ್ಳಿ ರಾಯಣ್ಣನ ‘ದರ್ಶನ’ ಆಗಿದ್ದು ಚಾಲೆಂಜಿಂಗ್ ಸ್ಟಾರ್ ಅವರಿಂದಲೇ..! ಆ ಮಟ್ಟಿಗೆ ಸಂಗೊಳ್ಳಿ ರಾಯಣ್ಣನ ಪಾತ್ರಕ್ಕೆ ದರ್ಶನ್ ಜೀವ ತುಂಬಿದ್ದರು. ಇದೀಗ ಪೌರಾಣಿಕ ಸಿನಿಮಾ ‘ಕುರುಕ್ಷೇತ್ರ’ದಲ್ಲಿ ದುರ್ಯೋಧನನ ಪಾತ್ರಕ್ಕೆ ದಚ್ಚು ನ್ಯಾಯ ಒದಗಿಸಿದ್ದಾರೆ. ಯಾರೂ ಯಾರೆಂದರೆ ಯಾರು ಕಂಡಿರದ, ಕೇವಲ ನಮ್ಮ ಕಲ್ಪನೆಯೊಳಗಿದ್ದ ದುರ್ಯೋಧನನ ಅವತಾರ ದರ್ಶನ್ ರೂಪದಲ್ಲೀಗ ಪ್ರತ್ಯಕ್ಷವಾದಂತಾಗಿದೆ.
ಸಂಗೊಳ್ಳಿ ರಾಯಣ್ಣನಿಗೆ ಆ್ಯಕ್ಷನ್ ಕಟ್ ಹೇಳಿದ್ದ ನಾಗಣ್ಣ ‘ಕುರುಕ್ಷೇತ್ರ’ದ ನಿರ್ದೇಶಕರು. ಮಹಾಭಾರತದ ಎಲ್ಲಾ ಪಾತ್ರಗಳಿಗೂ ಒಪ್ಪುವಂತೆ ನಟ-ನಟಿಯರನ್ನು ಆಯ್ಕೆ ಮಾಡುವಲ್ಲೇ ಚಿತ್ರತಂಡ ಗೆದ್ದಿದೆ. ಆಯಾಯ ಪಾತ್ರಕ್ಕೆ ಸೂಕ್ತವಾದ ನಟರ ಆಯ್ಕೆಯ ಯಶಸ್ಸೇ ಸಿನಿಮಾ ಗೆಲುವಿನ ಮೊದಲ ಮೆಟ್ಟಿಲು.
ಮಹಾಭಾರತದ ದುರ್ಯೋಧನ ಇಲ್ಲಿ ಹೀರೋ..! ದುರ್ಯೋಧನನ ಇಮೇಜೇ ಬದಲಾಗಿದೆ.. ‘ಕುರುಕ್ಷೇತ್ರ’ದ ಕಥಾನಾಯಕ ದುರ್ಯೋಧನ ಸುಯೋಧನ..! ಒಮ್ಮೆ ಸಿನಿಮಾವನ್ನು ನೋಡಿದ್ರೆ ಖಂಡಿತವಾಗಿಯೂ ಮಹಾಭಾರತದ ಎಲ್ಲಾ ಕ್ಯಾರೆಕ್ಟರ್ಗಳನ್ನು ನೀವು ಕಣ್ತುಂಬಿ ಕೊಂಡಂತಾಗುತ್ತದೆ..!
ಎಲ್ಲದಕ್ಕಿಂತ ಮುಖ್ಯವಾಗಿ ನಮ್ಮನ್ನೆಲ್ಲಾ ಅಗಲಿರುವ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಕೊನೇ ಬಾರಿ ಬೆಳ್ಳಿ ಪರದೆಯಲ್ಲಿ ನೋಡುವ ಅವಕಾಶ ಕುರುಕ್ಷೇತ್ರದಿಂದ ಸಿಕ್ಕಿದೆ. ಭೀಷ್ಮನಾಗಿ ಅಂಬಿ ನಟನೆ ಅದ್ಭುತ..! ಅಂಬಿಯೇ ಭೀಷ್ಮ.. ಭೀಷ್ಮನೇ ಅಂಬಿ..! ಆ ಪಾತ್ರವನ್ನು ಅಂಬರೀಶ್ ಬಿಟ್ಟಿದ್ದರೆ ಬೇರಾರು ಮಾಡಲು ಸಾಧ್ಯವಾಗ್ತಿರ್ಲಿಲ್ಲ ಅನ್ನುವಷ್ಟರ ಮಟ್ಟಿಗೆ ಅಂಬರೀಶ್ ತಮ್ಮ ಕೊನೇ ಚಿತ್ರದಲ್ಲಿ ನಟಿಸಿದ್ದಾರೆ..! ಅಂಬಿಯನ್ನು ಭೀಷ್ಮನ ಅವತಾರದಲ್ಲಿ ನೋಡಿದ ನೀವು ಖಂಡಿತಾ ಭಾವುಕರಾಗ್ತೀರಿ.
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಾಕ್ಷತ್ ಕೃಷ್ಣನೇ ಧರೆಗಿಳಿದು ಬಂದಂತೆ ಕೃಷ್ಣನ ಗೆಟಪ್ನಲ್ಲಿ ಸದ್ದು ಮಾಡಿದ್ದಾರೆ. ಇನ್ನುಳಿದಂತೆ ಕರ್ಣನಾಗಿ ಅರ್ಜುನ್ ಸರ್ಜಾ, ಕುಂತಿಯಾಗಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಭಾನುಮತಿಯಾಗಿ ಮೇಘನರಾಜ್, ಧರ್ಮರಾಯನಾಗಿ ಶಶಿಕುಮಾರ್, ಅರ್ಜುನನಾಗಿ ಸೋನು ಸೂದ್, ಭೀಮನಾಗಿ ಡ್ಯಾನಿಶ್ ಅಕ್ತರ್, ನಕುಲನಾಗಿ ಯಶಸ್ ಸೂರ್ಯ, ಸಹದೇವನಾಗಿ ಚಂದನ್, ಶಕುನಿಯಾಗಿ ರವಿಶಂಕರ್, ದ್ರೋಣಾಚಾರ್ಯರಾಗಿ ಶ್ರೀನಿವಾಸ್ ಮೂರ್ತಿ, ದ್ರೌಪದಿಯಾಗಿ ಸ್ನೇಹ , ದೃತರಾಷ್ಟ್ರರಾಗಿ ಶ್ರೀನಾಥ್, ದುಶ್ಯಾಸನನಾಗಿ ರವಿಚೇತನ್, ಗಂಗಾಧರರಾಜನಾಗಿ ಅವಿನಾಶ್ ಹೀಗೆ ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ಸಾಕ್ಷಾತ್ ಅವಾತಾರವನ್ನೇ ಎತ್ತಿದ್ದಾರೆ..!
ಇನ್ನು ಈ ಹಿಂದೆ ಪ್ರೆಸ್ಮೀಟ್ನಲ್ಲಿ ದರ್ಶನ್ ಅವರೇ ಹೇಳಿದಂತೆ ನಿರ್ಮಾಪಕ ಮುನಿರತ್ನ ಚಿತ್ರದ ಮೊದಲ ಹೀರೋ..! ಯಾಕಂದ್ರೆ, ಇಂಥಾ ಒಂದು ಬಹು ದೊಡ್ಡ ತಾರಾಗಣದ ಚಿತ್ರಕ್ಕೆ ಬಿಗ್ ಬಜೆಟ್ ಹಾಕಿ ಸ್ಯಾಂಡಲ್ವುಡ್ ಅನ್ನು ಇಡೀ ವಿಶ್ವ ತಿರುಗಿ ನೋಡುವಂತೆ ಮಾಡಿರುವ ಅವರಿಗೆ ಹ್ಯಾಟ್ಸ್ಆಪ್ ಹೇಳ್ಲೇ ಬೇಕು.
ಇಷ್ಟೆಲ್ಲಾ ಹೇಳಿದ ಮೇಲೆ ಅಭಿಮಾನಿಗಳ ಸಂಭ್ರಮದ ಬಗ್ಗೆ ಹೇಳ್ದೆ ಇದ್ರೆ ಹೇಗೆ? ವರ್ಷದ ಆರಂಭದಲ್ಲಿ ‘ಯಜಮಾನ’ನ ದರ್ಶನ ಪಡೆದಿದ್ದ ಡಿ.ಬಾಸ್ ಫ್ಯಾನ್ಸ್ ತಮ್ಮ ನೆಚ್ಚಿನ ‘ದಾಸ’ನ ದುರ್ಯೋಧನ ಅವತಾರವನ್ನು ನೋಡಲು ವರ್ಷದಿಂದಲೂ ಕಾಯ್ತಿದ್ರು. ಇಂದು ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ರಿಲೀಸ್ ಆಗಿದ್ದು. ದೊಡ್ಡ ದೊಡ್ಡ ಕಟೌಟ್ಗಳನ್ನು ಹಾಕಿ, ಪಟಾಕಿ ಸಿಡಿಸಿ ದಚ್ಚು ಫ್ಯಾನ್ಸ್ ಕುರುಕ್ಷೇತ್ರವನ್ನು ಬರಮಾಡಿಕೊಂಡಿದ್ದಾರೆ. ಹಿಂದಿ, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ. 2ಡಿ ಮತ್ತು 3ಡಿ ಅವತರಣಿಕೆಯಲ್ಲಿ ಸಿನಿಮಾ ರಿಲೀಸ್ ಆಗಿದ್ದು, ವೀಕ್ಷಕ ಪ್ರಭುಗಳನ್ನು ನೈಜ ಕುರುಕ್ಷೇತ್ರ ಅಖಾಡಕ್ಕೆ ಕೊಂಡೊಯ್ಯಲು ಇಡೀ ಟೀಮ್ ಗೆದ್ದಿದೆ.
ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆ ಕಮ್ಮಿ ಆದ್ಮೇಲೆ ಹಳ್ಳಿಗಳಿಂದ ಜನ ಹತ್ತಿರದ, ತಾಲೂಕು ಕೇಂದ್ರಗಳಲ್ಲಿನ ಥಿಯೇಟರ್ಗೆ ಹೋಗಿಯೇ ಹೋಗ್ತಾರೆ. ಸಂಗೊಳ್ಳಿ ರಾಯಣ್ಣ ಸಿನಿಮಾಕ್ಕೆ ಶಿಕ್ಷಕರೇ ಮಕ್ಕಳನ್ನು ಥಿಯೇಟರ್ಗೆ ಕರೆದುಕೊಂಡು ಹೋದಂತೆ ಕುರುಕ್ಷೇತ್ರದಲ್ಲೂ ಅದು ರಿಪೀಟ್ ಆಗುವ ಲಕ್ಷಣಗಳಿವೆ.
ಒಟ್ಟಿನಲ್ಲಿ ಕುರುಕ್ಷೇತ್ರ ಸ್ಯಾಂಡಲ್ವುಡ್ನ ಬ್ರಾಂಡ್ ವ್ಯಾಲ್ಯುವನ್ನು ಹೆಚ್ಚಿಸುವ ಸಿನಿಮಾ ಅಂದ್ರೆ ತಪ್ಪಾಗಲ್ಲ. 3 ಗಂಟೆಗಳ ಕಾಲ ನಿಮ್ಮನ್ನು ಕುಳಿತಲ್ಲಿಂದ ಅಲುಗಾಡದಂತೆ ಕೂರಿಸುತ್ತದೆ. ಪಕ್ಕಾ ಪೈಸಾ ವಸೂಲಿ ಸಿನಿಮಾ.. ಟಿಕೆಟ್ಗೆ ಕೊಟ್ಟ ದುಡ್ಡಿಗೆ ಮೋಸವಿಲ್ಲ… ನೀವಿನ್ನೂ ಸಿನಿಮಾ ನೋಡಿಲ್ಲ ಅಂತಾದ್ರೆ ಫ್ಯಾಮಿಲಿ ಸಮೇತ ನಿಮ್ಮ ಹತ್ತಿರದ ಚಿತ್ರ ಮಂದಿರಗಳಿಗೆ ಹೋಗಿ…
-ಚರಿತ ಪಟೇಲ್