ಟೀಮ್ ಇಂಡಿಯಾದ ಆಟಗಾರ ಮನೀಷ್ ಪಾಂಡೆಗಿಂತ ಪವನ್ ದೇಶಪಾಂಡೆಗೆ ಡಿಮ್ಯಾಂಡ್ ಹೆಚ್ಚಿದೆ. ಈ ಇಬ್ಬರು ಕನ್ನಡಿಗರಲ್ಲಿ ಮನೀಷ್ ಪಾಂಡೆ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಪರ ಬ್ಯಾಟ್ ಬೀಸಿ ಗುರುತಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಒಡಿಐ ಹಾಗೂ ಟಿ20ಗೆ ಮನೀಷ್ ಆಯ್ಕೆಯಾಗಿದ್ದಾರೆ. ಆದರೆ, ಕೆಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಮನೀಷ್ ಪಾಂಡೆಯವರಿಗಿಂತಾ ಧಾರವಾಡದ ಆಲ್ರೌಂಡರ್ ಪವನ್ ದೇಶಪಾಂಡೆಯವರಿಗೆ ಡಿಮ್ಯಾಂಡ್ ಬಂದಿದೆ..!
ಹೌದು, ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಹರಾಜಿನಲ್ಲಿ ಪವನ್ ದೇಶಪಾಂಡೆ 7.30 ಲಕ್ಷ ರೂ ಗರಿಷ್ಠ ಮೊತ್ತಕ್ಕೆ ಶಿವಮೊಗ್ಗ ಲಯನ್ಸ್ ಸೇರಿಕೊಂಡಿದ್ದಾರೆ. ಆರಂಭಿಕ ಸುತ್ತುಗಳಲ್ಲಿ ಮನೀಷ್ ಪಾಂಡೆಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಯಾವ ಫ್ರಾಂಚೈಸಿಗಳೂ ಮುಂದೆ ಬರಲಿಲ್ಲ. ಕೊನೇ ಕ್ಷಣದಲ್ಲಿ ಮನೀಷ್ 2 ಲಕ್ಷ ರೂಗಳಿಗೆ ಬೆಳಗಾವಿ ಪ್ಯಾಂಥರ್ಸ್ಗೆ ಸೇಲಾದರು.
ಮನೀಷ್ ಪಾಂಡೆ ವಿಂಡೀಸ್ ವಿರುದ್ಧದ ಟಿ20, ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಗಸ್ಟ್ 3ರಿಂದ 6ರವರೆಗೆ ಟಿ20 ಸರಣಿ, ಆಗಸ್ಟ್ 8ರಿಂದ 14ರವರೆಗೆ ಏಕದಿನ ಸರಣಿ ನಡೆಯಲಿದೆ. ಆಗಸ್ಟ್ 16ರಂದು ಬೆಂಗಳೂರಲ್ಲಿ ಕೆಪಿಎಲ್ಗೆ ಚಾಲನೆ ಸಿಗಲಿದ್ದು, ನಂತರ ಮೈಸೂರು, ಹುಬ್ಬಳ್ಳಿ ಮೊದಲಾದ ಕಡೆಗಳಲ್ಲಿ ಮ್ಯಾಚ್ಗಳು ನಡೆಯಲಿವೆ.
ತಂಡಗಳು : ಬಳ್ಳಾರಿ ಟಸ್ಕರ್ಸ್, ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ಶಿವಮೊಗ್ಗ ಲಯನ್ಸ್