ಹೆಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸಮನ್ವಯ ಸಮಿತಿ ಸಿದ್ದರಾಮಯ್ಯ ಅವರ ಕೈಗೊಂಬೆ ಅಂತ ಅವರು ಗುಡುಗಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರಿಗೆ ಬರೆದಿರುವ ಪತ್ರವನ್ನು ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ್ದಾರೆ. ತಾವು ನನ್ನಲ್ಲಿ ವಿಶ್ವಾಸವಿಟ್ಟು ಜನತಾದಳದ ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದು, ನನ್ನ ರಾಜಕೀಯ ಜೀವನದ ಬಹುಮುಖ್ಯ ಘಟ್ಟ ಎಂದು ನಾನು ಭಾವಿಸಿದ್ದೇನೆ. ಸ್ವಾಭಿಮಾನದ ಸಂಕೇತವಾಗಿ ನನ್ನ ಮಾತೃ ಪಕ್ಷ ಕಾಂಗ್ರೆಸ್ನಿಂದ ಹೊರ ಬರಬೇಕಾದ ಅನಿವಾರ್ಯತೆ ಎದುರಾಗಿ ಆಚೆ ಬಂದು ನಿಂತಾಗ ನನ್ನ ಅಭಿಲಾಷೆಯಂತೆ ನಂಗೆ ಹುಣಸೂರು ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗುವಂತೆ ಮಾಡಿ ರಾಜಕೀಯ ಪುನರ್ಜನ್ಮಕ್ಕೆ ಆಶೀರ್ವದಿಸಿದ್ದೀರಿ. ಅದಕ್ಕೆ ನಾನು ಕೃತಜ್ಞನಾಗಿರ್ತೀನಿ ಅಂತಾ ದೇವೇಗೌಡ್ರಿಗೆ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಯ ಸೋಲಿಗೆ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿರುವ ವಿಶ್ವನಾಥ್, ಮೈತ್ರಿ ಸರ್ಕಾರದ ಆಡಳಿತದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕ ಸಮರದಲ್ಲಿ ಹಿನ್ನಡೆ ಕಾಣುತ್ತಲೇ ರಾಜೀನಾಮೆಗೆ ಮುಂದಾಗಿದ್ದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ತಕ್ಷಣ ರಾಜೀನಾಮೆ ಬೇಡ ಎಂದಿದ್ರು. ಹಾಗಾಗಿ ನಿಧಾನವಹಿಸಿ ರಾಜೀನಾಮೆ ನೀಡಿದ್ದೇನೆ ಅಂದಿದ್ದಾರೆ.
ಒಂದೆರಡು ಇಲಾಖೆ ಹೊರತುಪಡಿಸಿ ಸರ್ಕಾರದ ಸಾಧನೆ ಶೂನ್ಯವಾಗಿದೆ. ಮೈತ್ರಿ ಕಿರುಕುಳದ ಮಧ್ಯೆಯೂ ಕುಮಾರಸ್ವಾಮಿ ಉತ್ತಮ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಶಕ್ತಿ ಮೀರಿ ಸರ್ಕಾರ ಮುನ್ನಡೆಸುತ್ತಿದ್ದಾರೆ. ಅಧಿಕಾರ ಇದ್ದಾಗ ಪಕ್ಷ ಮತ್ತು ಪ್ರಭುತ್ವ ಜೋಡೆತ್ತಿನಂತೆ ಇರಬೇಕು. ಆದ್ರೆ ಮಂತ್ರಿಗಳು, ಶಾಸಕರು ಪಕ್ಷದ ಬಗ್ಗೆ ಅಷ್ಟೊಂದು ಆಸಕ್ತಿ ಹೊಂದಿಲ್ಲ . ಪಕ್ಷದಲ್ಲಿ ಇರುವ ಪ್ರತಿ ವ್ಯಕ್ತಿಗೂ ಸ್ವಾತಂತ್ರ್ಯ ಬೇಕು. ಪ್ರಶಂಸೆ ಬೇಕು ಎನ್ನುವ ಮೂಲಕ ಪಕ್ಷದಲ್ಲಿ ದೇವೇಗೌಡರ ಕುಟುಂಬದ ಪ್ರಾಬಲ್ಯಕ್ಕೆ ಪರೋಕ್ಷವಾಗಿ ಕಟುಕಿದ್ದಾರೆ. ಪಕ್ಷಕ್ಕೆ ಹೊಸ ಗಾಳಿ, ಹೊಸ ನೀರು ದೊರೆತು ಗಟ್ಟಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರ ವಿರುದ್ಧ ಗುಡಿದ ಅವರು, ”ಸಮನ್ವಯ ಸಮಿತಿ ಕೇವಲ ಹೆಸರಿಗೆ ಮಾತ್ರ. ಜೆಡಿಎಸ್ ಅಧ್ಯಕ್ಷನಾದ್ರೂ ಸಮನ್ವಯ ಸಮಿತಿಯಲ್ಲಿ ಸ್ಥಾನವಿಲ್ಲ. ಎರಡೂ ಪಕ್ಷಗಳಲ್ಲಿ ಸಮನ್ವಯ ಸಾಧಿಸುವಲ್ಲಿ ಸಿದ್ದು ವಿಫಲವಾಗಿದ್ದಾರೆ ” ಅಂತ ಕಿಡಿಕಾರಿದ್ದಾರೆ.