Sunday, October 27, 2024

SMK ನಿವಾಸದಲ್ಲಿ ಅತೃಪ್ತರು ಆ್ಯಕ್ಟೀವ್..! ರಾಜ್ಯ ರಾಜಕಾರಣದಲ್ಲಿ ಮತ್ತೆ ಶುರುವಾಯ್ತು ‘ಕೃಷ್ಣ’ ಜಪ..!

ಭಾರಿ ಕುತೂಹಲ ಮೂಡಿಸಿದ್ದ 17ನೇ ಲೋಕ ಸಮರದ ಫಲಿತಾಂಶ ರಾಜ್ಯ ರಾಜಕಾರಣದ ಮೇಲೂ ಬಹಳ ದೊಡ್ಡ ಪರಿಣಾಮವನ್ನು ಬೀರಿದೆ. ಅಧಿಕಾರದ ಚುಕ್ಕಾಣಿ ಹಿಡಿದಲ್ಲಿಂದಲೂ ಅಲುಗಾಡುತ್ತಿರುವ ‘ಮೈತ್ರಿ’ ಸರ್ಕಾರ ಈಗ ಮತ್ತಷ್ಟು ಇಕ್ಕಟ್ಟಿನಲ್ಲಿ ಸಿಲುಕಿದೆ. ಬಿಜೆಪಿಗೆ ಸಂದ ಬಹು ದೊಡ್ಡ ಗೆಲುವು ರೆಬೆಲ್ ಶಾಸಕರನ್ನು ಮತ್ತಷ್ಟು ಹುರಿದುಂಬಿಸಿದೆ. ಮಾಜಿ ಸಿಎಂ ಎಸ್​.ಕೃಷ್ಣ ನಿವಾಸದಲ್ಲಿ ಬಿಜೆಪಿ ನಾಯಕರು ಹಾಗೂ ರೆಬೆಲ್ ಶಾಸಕರು ಒಟ್ಟುಗೂಡಿದ್ದು ದೋಸ್ತಿಗೆ ಚಳಿ-ಜ್ವರ ಹೆಚ್ಚಿಸಿದೆ.

ರಾಜ್ಯ ರಾಜಕಾರಣದ ಚಾಣಕ್ಯ ಎಸ್​.ಎಂ. ಕೃಷ್ಣ – ಅಧಿಕಾರ ಇರಲಿ ಇಲ್ಲದೇ ಇರಲಿ ಅದೇ ‘ಪವರ್’ : ಎಸ್.ಎಂ ಕೃಷ್ಣ, ಸೋಮನಹಳ್ಳಿ ಮಲಯ್ಯ ಕೃಷ್ಣ.. ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ  ಅತ್ಯಂತ ದೊಡ್ಡ ಹೆಸರು. 1962ರಲ್ಲಿ ಮೊಟ್ಟ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಎಸ್​​ ಎಂ ಕೃಷ್ಣ ಅವರು ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಕರ್ನಾಟಕದ ಮುಖ್ಯಮಂತ್ರಿಯಾಗಿ,  ಉಪಮುಖ್ಯಮಂತ್ರಿಯಾಗಿ ಕೇಂದ್ರ ಸಚಿವರಾಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿ ಎಸ್​.ಎಂ ಕೃಷ್ಣ ತಮ್ಮದೇ ಆದ ಛಾಪು ಮೂಡಿಸಿದ ನಾಯಕರು. ಅಧಿಕಾರ ಕೈಯಲ್ಲಿರಲಿ, ಇಲ್ಲದೇ ಇರಲಿ ಅದೇ ಗತ್ತು… ಅದೇ ‘ಪವರ್’.

ಮಂಡ್ಯದ ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಎಸ್​.ಎಂ. ಕೃಷ್ಣ ರಾಜಕೀಯ ಚಾಣಕ್ಯ. ಅವರ ಮಾತಿನಲ್ಲಿ ಆರ್ಭಟವಿಲ್ಲ, ವೀರಾವೇಶವಿಲ್ಲ, ಎಲ್ಲವನ್ನೂ ಸಾವಧಾನದಿಂದ, ಸಮಾನಚಿತ್ತದಿಂದ ಅಳೆದು-ತೂಗಿ ನಿಭಾಯಿಸುವ ಜಾಣ್ಮೆ. ಅವರ ಲೆಕ್ಕಾಚಾರವನ್ನು ಅರ್ಥ ಮಾಡಿಕೊಳ್ಳೋದು ಅದೆಂಥಾ ಘಟಾನುಘಟಿಗಳಿಂದಲೂ ಅಸಾಧ್ಯ. ಅವರ ರಾಜಕೀಯ ನಡೆಯನ್ನು ಅಷ್ಟು ಸುಲಭದಲ್ಲಿ ಹೀಗೇ ಅಂತ ಊಹಿಸಲೂ ಆಗಲ್ಲ.

ರಾಜ್ಯ ರಾಜಕಾರಣದಲ್ಲಿ ಮತ್ತೆ ಶುರುವಾಯ್ತು ‘ಕೃಷ್ಣ’ ಜಪ..! : ಇದೀಗ ಮತ್ತೆ ರಾಜ್ಯಕಾರಣದಲ್ಲಿ ‘ಕೃಷ್ಣ’ ಪರ್ವ ಶುರುವಾಗಿದೆ. ಸದ್ದಿಲ್ಲದೆ ಕೃಷ್ಣ ಜಪ ನಡೆಸುತ್ತಿದ್ದಾರೆ ನಾಯಕರು..! ಈ ಕೃಷ್ಣ ಜಪ ‘ದೋಸ್ತಿ’ ಯಲ್ಲಿ ಚಳಿ-ಜ್ವರ ಹೆಚ್ಚು ಮಾಡಿದೆ. ಯಾವಾಗ ಸರ್ಕಾರ ಬಿದ್ದೋಗುತ್ತೋ.. ಅಂತ ಆತಂಕ ಸಿಕ್ಕಾಪಟ್ಟೆ ಹೆಚ್ಚಿದೆ. ಕೃಷ್ಣ ಮತ್ತೆ ರಾಜ್ಯ ರಾಜಕಾರಣದಲ್ಲಿ ತಮ್ಮ ತಾಕತ್ತು ತೋರಿಸುತ್ತಿದ್ದಾರೆ.

ಎಸ್​.ಎಂ ಕೃಷ್ಣ ಅವರು ಲೋಕ ಸಮರಕ್ಕೂ ಮುನ್ನ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದರು. ಕಾಂಗ್ರೆಸ್​ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಮನಸ್ಸು ಮಾಡಿ ಕೃಷ್ಣ ಅವರನ್ನು ತಮ್ಮಲ್ಲೇ ಉಳಿಸಿಕೊಂಡು ಪಕ್ಷ ಬಲ ಪಡಿಸೋ ಕೆಲಸ ಮಾಡಬಹುದಿತ್ತು. ಆದರೆ ಯಾರೂ ಬಿಜೆಪಿಗೆ ಸೇರ ಹೊರಟ ಕೃಷ್ಣ ಅವರನ್ನು ತಡೆಯಲಿಲ್ಲ. ಅಂದು ನಾವೆಂಥಾ ಮಾಹಾಪರಾಧ ಮಾಡಿದ್ದೇವೆ ಅನ್ನೋದು ಇದೀಗ ‘ಕೈ’ ನಾಯಕರಿಗೆ ಗೊತ್ತಾಗ್ತಾ ಇರಬಹುದು.

ಕೃಷ್ಣ ಬಿಜೆಪಿ ಸೇರ್ಪಡೆಯನ್ನು ಹಗುರವಾಗಿ ಪರಿಗಣಿಸಿದ್ದ ನಾಯಕರಿಗೆ ಈಗ ಪಶ್ಚಾತಾಪ ಕಾಡ್ತಾ ಇದೆ. ಆದರೆ, ಈಗಾಗಲೇ ಸಮಯ ಮುಗಿದು  ಬಿಟ್ಟಿದೆ. ಕೃಷ್ಣ ತಮ್ಮ ಹೊಸ ಪಕ್ಷ ಭಾರತೀಯ ಜನತಾ ಪಾರ್ಟಿಗೆ ಬಲ ತುಂಬುವ ಕೆಲಸವನ್ನು ಸದ್ದಿಲ್ಲದೆ ಸೈಲೆಂಟಾಗಿ ಮಾಡ್ತಿದ್ದಾರೆ.. ಕೃಷ್ಣ ಲೆಕ್ಕಾಚಾರ ಮಾತ್ರ ‘ಕೈ’ ನಾಯಕರಿಗೆ ಅರ್ಥವಾಗದೇ ದೊಡ್ಡ ತಲೆನೋವಾಗಿ ಬಿಟ್ಟಿದೆ.

ಕಾಂಗ್ರೆಸ್​ ಶಾಸಕರ ‘ಕೃಷ್ಣ’ ಜಪ ದೋಸ್ತಿಯಲ್ಲಿ ಬಂಡಾಯದ ಬೇಗೆಯ ತಾಪವನ್ನು ಹೆಚ್ಚಿಸಿದೆ. ಯಾರೆಲ್ಲಾ ‘ಕೈ’ ಕೊಡ್ತಾರೆ ಅನ್ನೋ ತಲೆಬಿಸಿಯಲ್ಲಿದ್ದಾರೆ  ಮೈತ್ರಿ ಘಟಾನುಘಟಿಗಳು. ಸರ್ಕಾರ ಉಳಿಯುತ್ತಾ, ಉರುಳುತ್ತಾ ಅನ್ನೋ ಟೆನ್ಷನ್​ ಜೋರಾಗಿದೆ. ಮೈತ್ರಿ ಪತನಕ್ಕೆ ಟೈಮ್ ಬಾಂಬ್ ಫಿಕ್ಸ್ ಆಯ್ತಾ ಅನ್ನೋ ಆತಂಕ ಜಾಸ್ತಿಯಾಗಿದೆ.

ಒಬ್ರೇ ಡಿಸೈಡ್​ ಮಾಡೋಕೆ ಆಗಲ್ವಂತೆ, ಟೀಮ್ ಇದೆಯಂತೆ! :  ‘ಕೈ’ ಪಾಳಯದ ಅಗ್ರಗಣ್ಯ ಅತೃಪ್ತ ನಾಯಕ ರಮೇಶ್ ಜಾರಕಿಹೊಳಿ ಅವರು ಕೂಡ ಕೃಷ್ಣ ಜಪ ಆರಂಭಿಸಿದ್ದಾರೆ ‘SMK ನಿವಾಸದಲ್ಲಿ’ ಕಾಣಿಸಿಕೊಂಡ ಈ ರೆಬೆಲ್ ಶಾಸಕ ಹಾಗೆ ಬಂದು ಹೀಗೆ ಹೋಗಿಲ್ಲ..! ಮತ್ತೊಂದು ದೊಡ್ಡ ಬಾಂಬ್ ಸಿಡಿಸಿ ಬಿಟ್ಟಿದ್ದಾರೆ. ನಾನೊಬ್ಬನೇ ಡಿಸೈಡ್ ಮಾಡೋಕೆ ಆಗಲ್ಲ. ನಮ್ ಟೀಮ್ ಇದೆ.. ಆ ಟೀಮ್​ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಬೇಕು ಅಂತ ದೋಸ್ತಿ ನಾಯಕರ ತಲೆಗೆ ಮತ್ತೆ ಕೊರೆಯುವ ಹುಳ ಬಿಟ್ಟಿದ್ದಾರೆ.

ಕೃಷ್ಣ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ರಮೇಶ್, ರಾಜೀನಾಮೆ ಕೊಡುವಾಗ ಹೇಳಿಯೇ ಕೊಡುತ್ತೇನೆ. ನಮ್ಮದು ಒಂದು ಟೀಮ್​ ಇದೆ, ಎಲ್ರೂ ಸೇರಿ ನಿರ್ಧಾರ ತಗೊಳ್ತೀವಿ ಅಂದಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಶಾಕಿಂಗ್ ನ್ಯೂಸ್ ರವಾನಿಸಿ ಬಿಟ್ಟಿದ್ದಾರೆ.

‘ದೋಸ್ತಿ’ ಬರ್ತ್​ಡೇಗೆ ಲೋಕ ಸಮರ ತಂದಿತು ಸೂತಕ! ಸರ್ಕಾರದ ಪತನಕ್ಕೆ ಅತೃಪ್ತರು ಬರೆಯುತ್ತಿದ್ದಾರೆ ಜಾತಕ! : ಮೇ.23 17ನೇ ಲೋಕಸಮರದ ರಿಸೆಲ್ಟ್ ಬಂತು. ನರೇಂದ್ರ ಮೋದಿ ನಾಯಕತ್ವದ ಎನ್​ಡಿಎ ಪ್ರಚಂಡ ಬಹುಮತದಿಂದ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ರೆಡಿಯಾಗಿದೆ. ಯುಪಿಎ ಮತ್ತೆ ಹೀನಾಯ ಸೋಲನುಭವಿಸಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್​ ಮೈತ್ರಿ ಗೆಲ್ಲಲು ಸಾಧ್ಯವಾಗಿದ್ದು ಬರೀ ಎರಡೇ ಎಡರು ಸ್ಥಾನಗಳನ್ನು ಮಾತ್ರ..! ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್​ನ ಡಿ.ಕೆ ಸುರೇಶ್, ಹಾಸನದಲ್ಲಿ ಜೆಡಿಎಸ್​ನ ಪ್ರಜ್ವಲ್ ರೇವಣ್ಣ ಬಿಟ್ಟರೆ ಮೈತ್ರಿಯ ಒಬ್ಬರೇ ಒಬ್ಬರು ಗೆದ್ದಿಲ್ಲ. ಗೆದ್ದಿರೋ ಏಕೈಕ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ಕೂಡ ತಾತಾ ಹಾಗೂ ಮಾಜಿ ಪ್ರಧಾನಿ ದೇವೇಗೌಡ್ರುಗಾಗಿ ರಾಜೀನಾಮೆ ರಾಗ ತೆಗೆದಿದ್ದಾರೆ.

ಇವೆಲ್ಲಾ ಕಥೆ ಬಿಟ್ಟಾಕಿ, ಲೋಕಮರದ ರಿಸೆಲ್ಟ್ ಬಂದ ಮೇ.23ಕ್ಕೆ ನಮ್ಮ ರಾಜ್ಯದ ‘ಮೈತ್ರಿ’ ಸರ್ಕಾರಕ್ಕೆ 1 ವರ್ಷವಾಯ್ತು. ಲೋಕಸಮರದ ಹೀನಾಮಾನ ಸೋಲಿನಿಂದ ಮೈತ್ರಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗಿಲ್ಲ…ಶೋಕದಲ್ಲಿ ಸಂಭ್ರಮಿಸೋದಾದ್ರು ಹೇಗೆ? ಒಂದೆಡೆ ಲೋಕಸಮರದ ಸೋಲಿನ ದುಃಖ ಇರಲಿ…ಸಮಾಧಾನ ಮಾಡಿಕೊಳ್ಳೋಕು ಪುರಸೊತ್ತು ಇಲ್ಲ. ಯಾಕಂದ್ರೆ ಸರ್ಕಾರ ಉಳಿಸಿಕೊಳ್ಳೋದೇ ದೊಡ್ಡ ಟೆನ್ಷನ್ ಆಗಿ ಬಿಟ್ಟಿದೆ. ದೋಸ್ತಿ ಬರ್ತ್​ಡೇ ಸೆಲೆಬ್ರೇಷನ್​ಗೆ ‘ಲೋಕ’ಫಲಿತಾಂಶ ಸೂತಕ ತಂದಿದ್ದರೆ, ಇತ್ತ ಅತೃಪ್ತ ಶಾಸಕರೇ ಸರ್ಕಾರದ ಪತನಕ್ಕೆ ಜಾತಕ ಬರೆಯುತ್ತಿದ್ದಾರೆ.

ದಿಢೀರ್ ರಾಜಕೀಯ ಶಕ್ತಿ ಕೇಂದ್ರವಾಯ್ತು SMK ನಿವಾಸ! :  ಹೌದು, ಈ ಮೈತ್ರಿ ಸರ್ಕಾರ ರಚನೆ ಆದಲ್ಲಿಂದ ಬಿಜೆಪಿಯವ್ರು ಸರ್ಕಾರದ ಪತನಕ್ಕೆ ಸಾಕಷ್ಟು ಪ್ಪಾಫ್ ಪ್ಲಾನ್ ಗಳನ್ನು ಮಾಡಿ ಸೋತಿದ್ದಾರೆ. ಆದ್ರೆ, ಛಲ ಬಿಡದೆ ಮೈತ್ರಿ ಪತನವನ್ನು ಮಾಡೇ ಮಾಡ್ತೀವಿ ಅಂತ ಕೂತಿದ್ದಾರೆ. ಲೋಕ ಸಮರದ ರಿಸೆಲ್ಟ್ ಬಿಜೆಪಿಗೆ ಬಲ ತಂದಿದೆ. ಆದ್ರೆ, ಬಿಜೆಪಿ ಅವರು ಕಷ್ಟಪಡದೇನೇ ಮೈತ್ರಿ ಉರುಳುವ ಸಾಧ್ಯತೆ ಇದೆ. ಯಾಕಂದ್ರೆ ಸ್ವತಃ ದೋಸ್ತಿ ಶಾಸಕರೇ ಪತನಕ್ಕೆ ಜಾತಕ ಬರೆಯುತ್ತಿದ್ದಾರಲ್ಲಾ?

ಲೋಕ ಸಮರದ ಮುಂಚೆಯೇ ಸಿಡಿದೆದ್ದಿದ್ದ ಕಾಂಗ್ರೆಸ್ ನ ಕೆಲ ಅತೃಪ್ತ ಶಾಸಕರು ಈಗ ಮತ್ತಷ್ಟು ಜೋರಾಗಿ ಅಸಹನೆಯ ರಣಕಹಳೆ ಊದುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಎಸ್​.ಎಂ ಕೃಷ್ಣ ಅವರ ನಿವಾಸ ಬಹುಕಾಲದ ನಂತರ ಇದೀಗ ಮತ್ತೆ ದಿಢೀರ್ ಅಂತ ರಾಜಕೀಯ ಶಕ್ತಿ ಕೇಂದ್ರವಾಗಿ ಬದಲಾಗಿದೆ. ಅತೃಪ್ತ ಶಾಸಕರು ಎಸ್​ಎಂಕೆ ನಿವಾಸದಲ್ಲಿ ಸೇರಿ ಸಮಾಲೋಚನೆ ನಡೆಸಿದ್ದಾರೆ.

 ರಮೇಶ್ ಜಾರಕಿ ಹೊಳಿ ಎಸ್​ಎಂಕೆ ನಿವಾಸಕ್ಕೆ ಭೇಟಿ ಕೊಟ್ಟಿದ್ದನ್ನು ಅವರು ಹೇಳಿದ ಮಾತುಗಳನ್ನು ಈಗಾಗಲೇ ಕೇಳಿದ್ದೀವಿ. ಅವ್ರು ಹೇಳಿದ್ದು, ನಾನೊಬ್ಬನೇ ರಾಜೀನಾಮೆ ಬಗ್ಗೆ ತೀರ್ಮಾನಿಸೋಕೆ ಆಗಲ್ಲ. ನಮ್ ಟೀಮ್ ಡಿಸೈಡ್ ಮಾಡ್ಬೇಕು ಅಂತ. ಹಾಗಾದ್ರೆ ರಮೇಶ್ ಟೀಮ್​ ನಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋದನ್ನು ತಿಳಿಬೇಕು ಅಲ್ವೇ?

ರಮೇಶ್ ಅವರ ಜೊತೆಗೆ ಎಸ್​ಎಂಕೆ ನಿವಾಸಕ್ಕೆ ಆಗಮಿಸಿದ್ದ ಶಾಸಕ ಡಾ. ಸುಧಾಕರ್ ರಮೇಶ್​ ಟೀಮ್​ನಲ್ಲಿನ ಪ್ರಮುಖ ಸದಸ್ಯರು ಅನ್ನೋದು ಕನ್ಫರ್ಮ್. ಜೊತೆಗೆ ಬಂದಿದ್ದರು ಅನ್ನೋದಕ್ಕಿಂತ ಹೆಚ್ಚಾಗಿ ಅವರು ಕೂಡ ಮೈತ್ರಿ ವಿರುದ್ಧ ಅಪಸ್ವರ ತೆಗೆದ ಶಾಸಕರೇ ಅಲ್ಲವೇ? ಇನ್ನು ಮಹೇಶ್ ಕಮಟಹಳ್ಳಿ ಜಾರಕಿಹೊಳಿ ಜೊತೆಗಿರ್ತೀನಿ ಅಂದಿದ್ದಾರೆ. ಬಿ.ಸಿ ಪಾಟೀಲ್ ದೋಸ್ತಿ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದಾರೆ. ಇವುರುಗಳಲ್ಲದೆ ಅತೃಪ್ತ ಶಾಸಕರಾದ ಬಿ. ನಾಗೇಂದ್ರ, ಕಂಪ್ಲಿಯ ಗಣೇಶ್, ಭೀಮಾ ನಾಯ್ಕ್​​, ಪ್ರತಾಪ್ ಗೌಡ ಪಾಟೀಲ್, ಬಸವನಗೌಡ ದದ್ದಲ್​ ಜಾರಕಿಹೊಳಿ ಟೀಮ್ ಸೇರೋ ಸಾಧ್ಯತೆ ಇದೆ. ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಕೂಡ ರಮೇಶ್ ಟೀಮ್​ಗೆ ಜಾಯಿನ್ ಆದ್ರೆ ಅಚ್ಚರಿ ಪಡಬೇಕಿಲ್ಲ.

ಆದ್ರೆ ಕೇವಲ ರಮೇಶ್ ಜಾರಕಿಹೊಳಿ ಮತ್ತು ಸುಧಾಕರ್ ಎಸ್​ಎಂಕೆಯನ್ನು ಭೇಟಿ ಮಾಡಿದ್ರೆ ದೋಸ್ತಿಗೆ ಪತನಕ್ಕೆ ಮುಹೂರ್ತ ಫಿಕ್ಸ್ ಆಗಿದೆ ಅಂತ ಹೇಳೋಕೆ ಸಾಧ್ಯ ಆಗ್ತಿರ್ಲಿಲ್ವೇನೋ? ಅಲ್ಲಿ ಬೇರೆ ಬೇರೆ ನಾಯಕರ ಸಮಾಗವೂ ಆಯ್ತು..! ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಡಾ. ಸುಧಾಕರ್ ಜೊತೆ ಜೊತೆಗೆ ಎಸ್​.ಎಂ.ಕೆ ನಿವಾಸಕ್ಕೆ ಭೇಟಿ ನೀಡಿದ್ರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ, ಮಾಜಿ ಡಿಸಿಎಂ ಆರ್.ಅಶೋಕ್ ಕೂಡ ಆಗಮಿಸಿದ್ರು. ಅದಲ್ಲದೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಲೋಕ ಕಣದಲ್ಲಿ ಸ್ಪರ್ಧಿಸಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸಿ ಇತಿಹಾಸ ನಿರ್ಮಿಸಿರುವ ಸುಮಲತಾ ಅಂಬರೀಶ್ ಕೂಡ ಬಂದಿದ್ರು.

ಒಂದೇ ಕಡೆ ಈ ಎಲ್ಲಾ ನಾಯಕರು ಸಮಾಗಮ ಆಗಿದ್ದು ಅನೇಕ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಮೊದಲೇ ಅಲುಗಾಡುತ್ತಿರುವ ಮೈತ್ರಿ ಸರ್ಕಾರಕ್ಕೆ ಪತನದ ಭೀತಿ ಮತ್ತಷ್ಟು ಗಾಢವಾಗಿ ಕಾಡಲಾರಂಭಿಸಿದೆ. ಬಾಯಿ ಮಾತಿಗೆ ಸರ್ಕಾರ ಉರುಳಲ್ಲ, ಉಳಿಯುತ್ತೆ ಅಂತ ದೋಸ್ತಿ ಮಾಧ್ಯಮಗಳ ಮುಂದೆ ಹೇಳ್ತಾ ಇದ್ರೂ ಒಳಗೊಳಗಿನ ಉರಿ ಗಾಯಕ್ಕೆ ಮುಲಾಮು ಇಲ್ಲ..! ಅತೃಪ್ತರು ಮತ್ತಷ್ಟು ರೆಬೆಲ್ ಆಗಿದ್ದು ಉರಿ ಬೆಂಕಿಗೆ ತುಪ್ಪ ಸುರಿತಾ ಇದ್ದಾರೆ..! ಕಾಕತಾಳಿಯವೋ , ಏನೋ ಬಿಜೆಪಿ ನಾಯಕರು ಕೂಡ ಅತೃಪ್ತರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ..! ಪಕ್ಷ ತೊರೆದು ಬಿಜೆಪಿ ಸೇರಿ ಡಾ. ಉಮೇಶ್ ಜಾಧವ್ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸೋಲಿಸಿ ಸಂಸತ್ ಪ್ರವೇಶಿಸಿರೋದು ಅತೃಪ್ತರಿಗೆ ಮತ್ತಷ್ಟು ಧೈರ್ಯ ತಂದಿದೆ.

ಎಸ್​ಎಂಕೆ ನಿವಾಸದಲ್ಲಿ ಅತೃಪ್ತರು ಬಿಜೆಪಿ ನಾಯಕರ ಜೊತೆ ಸಮಾಲೋಚನೆ ನಡೆಸಿದ್ದು ಪಕ್ಕಾ. ಸುಮಲತಾ ಅಂಬರೀಶ್ ಅಲ್ಲಿದ್ದಿದ್ದೂ ನಿಜ. ಆದ್ರೆ ಇದೊಂದು ಕಾಕತಾಳೀಯ ಭೇಟಿ, ಆರೋಗ್ಯ ವಿಚಾರಿಸೋಕೆ ಬಂದ್ವಿ, ಆಶೀರ್ವಾದ ಪಡ್ಕೊಂಡು ಹೋಗೋಕೆ ಬಂದ್ವಿ ಅಂತೆಲ್ಲಾ ಹೇಳಿದ್ದಾರೆ. ಆದ್ರೆ, ರಮೇಶ್ ಜಾರಕಿಹೊಳಿ  ಒಂದ್ಸಲ ಇದೇ ರೀತಿ ಹೇಳಿದ್ರೂ ಕೂಡ… ಮತ್ತೆ ಹೇಳಿದ್ದು ರಾಜೀನಾಮೆ ಕೊಡೋ ಬಗ್ಗೆ ನಮ್ ಟೀಮ್ ಚರ್ಚಿಸಿ ಹೇಳ್ಬೇಕು ಅಂತ..! 

ಎಸ್​ಎಂಕೆ ನಿವಾಸದಲ್ಲಿ ಅತೃಪ್ತರು ಆ್ಯಕ್ಟಿವ್ ಆಗಿದ್ರು. ಇಷ್ಟೇ ಅಲ್ಲದೆ ಎಸ್​ಎಂಕೆ ಮನೆಯಿಂದ ಹೊರಟ ರಮೇಶ್ ಜಾರಕಿಹೊಳಿ ಗೋವಾ ಕಡೆ ಪಯಣ ಬೆಳೆಸಿದ್ದಾರೆ. ಗೋವಾ ಕಡೆಗೆ ಮಹೇಶ್ ಕುಮಟಹಳ್ಳಿ, ನಾಗೇಂದ್ರ, ಸುಧಾಕರ್, ಪ್ರತಾಪ್​ ಗೌಡ ಪಾಟೀಲ್ ಕೂಡ ಗೋವಾ ಕಡೆ ಪಯಣ ಬೆಳೆಸೋ ಸಾಧ್ಯತೆ ಇದ್ದು,  ಗೋವಾದಿಂದಲೇ ಆಪರೇಷನ್ ಕಮಲ ಪಾರ್ಟ್-2 ಶುರುವಾಗೋ ಸಾಧ್ಯತೆ ಇದೆ. ಒಟ್ನಲ್ಲಿ ದೋಸ್ತಿಗೆ ಮಹಾ ಕಂಟಕ ಕಾದಿದ್ಯಾ ಅನ್ನೋದನ್ನು ಕಾದು ನೋಡ್ಬೇಕು. 

-ಶಶಿಧರ್ ಎಸ್​ ದೋಣಿಹಕ್ಲು

 

 

RELATED ARTICLES

Related Articles

TRENDING ARTICLES