ಬೆಂಗಳೂರು: ಎಕ್ಸಿಟ್ ಪೋಲ್ ಬಳಿಕ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸ್ಫೋಟಕ ಸುದ್ದಿ ಕೇಳಿಬಂದಿದೆ. ತಲ್ಲಣಗೊಂಡಿರೋ ದೋಸ್ತಿ ಪಕ್ಷಗಳಿಗೆ ಕೈ ಶಾಸಕ ರೋಷನ್ ಬೇಗ್ ನೀಡಿರೋ ಹೇಳಿಕೆಯಿಂದ ಇನ್ನಷ್ಟು ಟೆನ್ಶನ್ ಆಗಿದೆ. ಅಗತ್ಯ ಬಿದ್ದಲ್ಲಿ ಬಿಜೆಪಿ ಜೊತೆಗೂ ಕೈಜೋಡಿಸಲು ರೆಡಿ ಅಂತ ಶಿವಾಜಿನಗರ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ರಾಷ್ಟ್ರೀಯ ಖಾಸಗಿ ಉರ್ದು ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ರೋಷನ್ ಬೇಗ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ಅಸಮಾಧಾನ ತೋಡಿಕೊಂಡ ರೋಷನ್ ಬೇಗ್ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಲೋಕ ಸಮರದಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಫ್ಲಾಪ್ ಶೋ ನೀಡಿದೆ. ಎನ್ಡಿಎ ಅಧಿಕಾರಕ್ಕೆ ಮರಳಿ ಬರುತ್ತೆ ಅನ್ನೋದು ನನಗೆ ಮೊದಲೇ ಗೊತ್ತಿತ್ತು” ಎಂದಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಫ್ಲಾಪ್ ಶೋ: “ಎಕ್ಸಿಟ್ ಪೋಲ್ ರಿಸಲ್ಟ್ನಿಂದ ನನಗೇನು ಅಚ್ಚರಿಯಾಗಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಫ್ಲಾಪ್ ಶೋ ನೀಡಿದೆ. ‘ಕೈ’ಗೆ ಒಳ್ಳೆಯ ರಿಸಲ್ಟ್ ಬರುವುದಿಲ್ಲ ಅಂತಾ ಮೊದಲೇ ಅನ್ನಿಸಿತ್ತು. ಎನ್ಡಿಎ ಸರ್ಕಾರ ಬರುತ್ತೆ ಎಂದು ನನ್ನ ಮನಸು ಹೇಳುತ್ತಿತ್ತು. ನಾನು ಮುಸಲ್ಮಾನ ಬಂಧುಗಳಲ್ಲಿ ಇದನ್ನೇ ಮನವಿ ಮಾಡುತ್ತೇನೆ. ಇನ್ನಾದ್ರೂ ಪರಿಸ್ಥಿತಿಯ ಜೊತೆ ಸ್ವಲ್ಪ ಹೊಂದಿಕೊಳ್ಳಲು ಕಲಿಯಿರಿ. ಅದು ಹಾಗಾಗಬಾರ್ದು, ಹೀಗಾಗಬಾರದು ಅನ್ನೋದನ್ನು ಬಿಡಿ. ಹಜ್ ಭವನ ನಿರ್ಮಾಣಕ್ಕೆ ಅನುದಾನ ಕೊಟ್ಟಿದ್ದು ಸದಾನಂದಗೌಡ. ಬಿಜೆಪಿ ಜೊತೆ ಕೈಜೋಡಿಸುವದಾದ್ರೆ ಕೈ ಜೋಡಿಸೋಣ. ಒಂದೇ ಒಂದು ಪಕ್ಷ ನಂಬಿ ಕೂರುವ ಅಗತ್ಯವಿಲ್ಲ. ಕರ್ನಾಟಕದಲ್ಲಿ ಮುಸಲ್ಮಾನರ ಜೊತೆ ಏನಾಯ್ತು..? ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದೇ ಸೀಟ್ ನೀಡಲಾಗಿದೆ” ಅಂತ ಹೇಳಿದ್ರು.