ನವದೆಹಲಿ: ಇಂದು ದೇಶಾದ್ಯಂತ ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ನಡೆಯಲಿದ್ದು, 6 ರಾಜ್ಯ, ಒಂದು ಕೇಂದ್ರಾಡಳಿತ ಕ್ಷೇತ್ರದಲ್ಲಿ ಜನ ಹಕ್ಕು ಚಲಾಯಿಸಲಿದ್ದಾರೆ. ದೇಶದ 59 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಉತ್ತರ ಪ್ರದೇಶದ 14 ಕ್ಷೇತ್ರ, ಹರಿಯಾಣದ 10 ಕ್ಷೇತ್ರ, ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳದ ತಲಾ 8 ಕ್ಷೇತ್ರ, ದೆಹಲಿಯ 7 ಮತ್ತು ಜಾರ್ಖಂಡ್ನ 4 ಕ್ಷೇತ್ರಗಳಲ್ಲಿ ಜನರು ಮತ ಚಲಾಯಿಸಲಿದ್ದಾರೆ.
ಬೆಳಗ್ಗೆ 7 ರಿಂದ ಸಂಜೆ 6 ವರೆಗೆ ಮತದಾನ ನಡೆಯಲಿದೆ. 6ನೇ ಹಂತದ ಮತದಾನದಲ್ಲಿ ಅಖಾಡದಲ್ಲಿ ಘಟಾನುಘಟಿಗಳು ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಬಿಜೆಪಿಯ ಪ್ರಜ್ಞಾ ಸಿಂಗ್ ಠಾಕೂರ್, ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಕೇಂದ್ರ ಸಚಿವರಾದ ಮನೇಕಾ ಗಾಂಧಿ, ಡಾ.ಹರ್ಷವರ್ಧನ್, ರಾಧಾ ಮೋಹನ್ ಸಿಂಗ್, ನರೇಂದ್ರ ಸಿಂಗ್ ತೋಮರ್, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಬಾಕ್ಸರ್ ವಿಜೇಂದರ್ ಸಿಂಗ್ ಸೇರಿದಂತೆ ಹಲವರು ಕಣದಲ್ಲಿದ್ದಾರೆ.
6ನೇ ಹಂತದ ಮತದಾನ ಬಿಜೆಪಿಗೆ ಪ್ರತಿಷ್ಠೆಯ ಚುನಾವಣೆಯಾಗಿದ್ದು, 2014ರ ಚುನಾವಣೆಯಲ್ಲಿ ಈ 59 ಕ್ಷೇತ್ರಗಳ ಪೈಕಿ ಬಿಜೆಪಿ 45 ಕ್ಷೇತ್ರ ಗೆದ್ದಿತ್ತು. ಈ ಬಾರಿಯೂ ಅದೇ ಹುಮ್ಮಸ್ಸಿನಲ್ಲಿರುವ ಕೇಸರಿ ಪಡೆ ಅಷ್ಟೂ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ತವಕದಲ್ಲಿದೆ.