ಕರ್ನಾಟಕದಲ್ಲಿ ಕ್ಷಿಪ್ರಗತಿಯಲ್ಲಿ ಜನಮನ್ನಣೆ ಗಳಿಸಿರುವ ಪವರ್ ಟಿವಿ ಕನ್ನಡ ಸುದ್ದಿವಾಹಿನಿ ಮೇಲೆ ಇತ್ತೀಚಿನ ದಿನಗಳಲ್ಲಿ ಗಂಭೀರ ಆರೋಪವೊಂದು ಕೇಳಿಬಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಪ-ಪ್ರತ್ಯಾರೋಪಗಳು ಸರ್ವೇಸಾಮಾನ್ಯ. ಆದರೆ ನಮ್ಮ ಪವರ್ ಟಿವಿ ಸುದ್ದಿವಾಹಿನಿ ಮೇಲೆ ಬಂದಿರುವ ಆರೋಪ ಗಂಭೀರವಾದದ್ದು. ಐಎಂಎ ಕಂಪನಿಗೆ 1ರಿಂದ 2 ಕೋಟಿ ಕೊಡಿ, ಇಲ್ಲವಾದರೆ ನಿಮ್ಮ ವಿರುದ್ಧ ಸುದ್ದಿ ಬಿತ್ತರಿಸುತ್ತೇವೆ ಎಂದು ಬ್ಲ್ಯಾಕ್ಮೇಲ್ ಮಾಡಿರುವುದಾಗಿ ವರದಿಯಾಗಿದೆ. ಈ ಮೂಲಕ ಪವರ್ ಟಿವಿ ತಿಳಿಯಪಡಿಸುವುದೇನಂದರೆ ಈ ಸುದ್ದಿ ಸಂಪೂರ್ಣ ಸುಳ್ಳಾಗಿದ್ದು, ಪವರ್ ಟಿವಿ ಮೇಲೆ ಸುಳ್ಳು ಕೇಸ್ ದಾಖಲಿಸಿರುವ ಐಎಂಎ ಕಂಪನಿ ವಿರುದ್ಧ ಪವರ್ ಟಿವಿ ಹೋರಾಟ ನಡೆಸಲಿದೆ. ಐಎಂಎ ಕಂಪನಿ ಅಕ್ರಮ ಎಸಗಿರುವುದು ಶೇ.100ರಷ್ಟು ಸತ್ಯವಾಗಿದ್ದು, ಅದನ್ನ ದಾಖಲೆ ಸಮೇತ ಸಾಬೀತುಪಡಿಸಲು ಪವರ್ ಟಿವಿ ಬದ್ಧವಾಗಿದೆ. ಐಎಂಎ ಕಂಪನಿ ವಿರುದ್ಧ ನಾವು ಬಿತ್ತರಿಸಿರುವ ಸುದ್ದಿಗೆ ನಾವು ಬದ್ಧರಾಗಿದ್ದು, ಆ ಕಂಪನಿಯ ಕಡೆಯಿಂದ ಯಾರೇ ಬಂದರೂ ಅವರೊಂದಿಗೆ ಬಹಿರಂಗವಾಗಿ ಚರ್ಚಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.
ಇನ್ನು ಐಎಂಎ ಕಂಪನಿ ಅಕ್ರಮ ಕುರಿತು ಪವರ್ ಟಿವಿ ಸುದ್ದಿ ಬಿತ್ತರಿಸಿದ ನಂತರ ಕಂಪನಿಯವರು ನಮ್ಮ ಮೇಲೆಯೇ ದೂರು ದಾಖಲಿಸಿದ್ದಾರೆ. ಈ ಸಂಬಂಧ ಎಫ್ಐಆರ್ ಕೂಡ ದಾಖಲಾಗಿದೆ. ಆನಂತರ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಈ ಸಂಬಂಧ ಪವರ್ ಟಿವಿ ಸಿಸಿಬಿ ತನಿಖಾಧಿಕಾರಿಗಳ ಎದುರು ಹಾಜರಾಗಿ ಪ್ರಕರಣದ ಸಂಪೂರ್ಣ ವಿವರಗಳನ್ನು ನೀಡಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಮಾನ್ಯ ಗೃಹ ಸಚಿವರಾದ ಎಂ.ಬಿ.ಪಾಟೀಲ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸುನೀಲ್ಕುಮಾರ್ ಹಾಗೂ ಜಂಟೀ ಆಯುಕ್ತ ಅಲೋಕ್ ಕುಮಾರ್ ಅವರನ್ನು ಕಂಡು ಈಗಾಗಲೇ ಐಎಂಎ ವಂಚನೆ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ.
ಸಮಾಜದಲ್ಲಿ ನಡೆಯುವ ಅನ್ಯಾಯ, ಅಕ್ರಮ ಹಾಗೂ ಭ್ರಷ್ಟಾಚಾರ ಕುರಿತು ವರದಿ ಮಾಡುವುದು ಮಾಧ್ಯಮಗಳ ಕರ್ತವ್ಯ. ಅದೇ ಬದ್ಧತೆಯೊಂದಿಗೆ ಪವರ್ ಟಿವಿ ತಂಡ ಐಎಂಎ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಕ್ರಮಗಳ ಕುರಿತು ವರದಿ ಮಾಡಿದೆ. ಆದರೆ ಅಕ್ರಮ ಮಾಡಿದ ಕಂಪನಿಯವರು ನಮ್ಮ ಮೇಲೆಯೇ ದೂರು ದಾಖಲಿಸುವ ಮೂಲಕ ಸತ್ಯ ಬಯಲಿಗೆಳೆಯಲು ಹೋದ ಮಾಧ್ಯಮದ ವಿರುದ್ಧವೇ ಸಮರ ಸಾರಿದ್ದಾರೆ.
ಹೇಗಿದೆ ನೋಡಿ ವ್ಯಂಗ್ಯ, ತಾವು ಮಾಡಿರುವ ಅಕ್ರಮ ಮುಚ್ಚಿಕೊಳ್ಳಲು ಬಯಲಿಗೆಳೆಯಲು ಮುಂದಾದ ಮಾಧ್ಯಮದ ವಿರುದ್ಧವೇ ಸುಳ್ಳು ಕೇಸ್ ದಾಖಲಿಸಿ ತಾನು ಸಾಚಾ ಎಂದು ನಿರೂಪಿಸಿಕೊಳ್ಳಲು ಹೊರಟಿದೆ ಐಎಂಎ ಕ್ರೆಡಿಟ್ ಕೋಆಪರೇಟಿವ್ ಕಂಪನಿ. ಈ ರೀತಿ ನಮ್ಮ ವಿರುದ್ಧ ಸುಳ್ಳು ಕೇಸ್ ಹಾಕಿ ನಮ್ಮನ್ನ ಬೆದರಿಸುತ್ತೇವೆಂದು ಭಾವಿಸಿದ್ದರೆ ನಾವು ಖಂಡಿತ ಹಿಂದೆ ಸರಿಯುವುದಿಲ್ಲ. ಅನ್ಯಾಯ, ಅಕ್ರಮಗಳ ವಿರುದ್ಧ ಪವರ್ ಟಿವಿ ಹೋರಾಟ ಮುಂದುವರಿಯಲಿದೆ. ಈ ಪ್ರಕರಣದಲ್ಲಿಯೂ ಕೂಡ ಐಎಂಎ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ತಪ್ಪು ಮಾಡಿರುವುದು ನಿಜವಾಗಿದ್ದು, ಅದನ್ನು ಸಾಬೀತುಪಡಿಸಲು ಪವರ್ ಟಿವಿ ಕಟಿಬದ್ಧವಾಗಿದೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅಂತೆಯೇ ಹಣ ನೀಡುವಂತೆ ಐಎಂಎ ಕಂಪನಿಗೆ ಪವರ್ ಟಿವಿ ಬ್ಲ್ಯಾಕ್ಮೇಲ್ ಮಾಡಿದ್ದನ್ನು ನೀವು ಸಾಬೀತುಪಡಿಸಬೇಕೆಂದಿದ್ದರೆ ಅದಕ್ಕೂ ನಮ್ಮ ವಾಹಿನಿಯಲ್ಲೇ ಮುಕ್ತ ಅವಕಾಶ ಮಾಡಿಕೊಡುವುದಾಗಿ ಚಾಲೆಂಜ್ ಮಾಡುತ್ತಿದ್ದೇವೆ. ಜೊತೆಗೆ ನೀವು ಐಎಂಎ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯಲ್ಲಿ ಮಾಡುತ್ತಿರುವುದೆಲ್ಲ ಕಾನೂನುಬದ್ಧವಾಗಿದೆ ಎಂದು ಸಾಬೀತುಪಡಿಸುವುದಾದರೆ ಅದಕ್ಕೂ ನಮ್ಮ ಸ್ಟುಡಿಯೋದಲ್ಲಿ ಮುಕ್ತ ಅವಕಾಶ ಮಾಡಿಕೊಡುತ್ತೇವೆ ಎಂದು ಈ ಮೂಲಕ ಸ್ಪಷ್ಟವಾಗಿ ತಿಳಿಯಪಡಿಸುತ್ತಿದ್ದೇವೆ.
https://www.facebook.com/powertvnews/videos/2102048693245838/