ಮಂಡ್ಯ: ನಾನು ಪ್ರಚಾರಕ್ಕೆ ಹೋದಲ್ಲೆಲ್ಲಾ ಎಲೆಕ್ಷನ್ ಖರ್ಚಿಗೆಂದು ಜನ ಸ್ವಾಭಿಮಾನದ ಹಣ ತಂದು ಕೊಟ್ರು. ಅದು ಎಂದೂ ಮರೆಯಲಾಗದಂತಹ ಘಟನೆ ಅಂತ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಹೋದಾಗಾ ಜನ ಎಲೆಕ್ಷನ್ ಖರ್ಚಿಗೆ ಅಂತ ಕಣ ತಂದ್ಕೊಟ್ರು. ಅದು ಬಹಳ ಭಾವನಾತ್ಮಕ ವಿಚಾರವಾಗಿತ್ತು. ಮಾರ್ಕೆಟ್ನಲ್ಲಿ ತರಕಾರಿ ಮಾರೋರು 20 ರೂಪಾಯಿ ಕಟ್ಟುಗಳನ್ನ ತಂದ್ಕೊಟ್ರು. ಅದನ್ನು ತಗೊಳೋಕೆ ಹಿಂಜರಿದಾಗ ಇದು ಸ್ವಾಭಿಮಾನದ ಹಣ, ನೀವು ತಗೊಳ್ಬೇಕು ಅಂದ್ರು. ಜನ ಕಷ್ಟಪಟ್ಟು ಸಂಪಾದಿಸಿದ ಹಣವನ್ನು 100, 200, 50, ಸಾವಿರ ರೂಪಾಯಿಗಳನ್ನು ತಂದು ಕೊಟ್ರು. ಎಲೆಕ್ಷನ್ ಟೈಂನಲ್ಲಿ ರಾಜಕಾರಣಿಗಳು ಹಣ ಕೊಡ್ತಾರೆ, ಆದ್ರೆ ಇಲ್ಲಿ ಜನರೇ ನಂಗೆ ತಂದು ಕೊಟ್ರು. ಜನ ಕೊಟ್ಟ ದುಡ್ಡು ಆಶಿರ್ವಾದದಂತಿತ್ತು. ಇದು ಮರೆಯಲಾಗದ ಘಟನೆ. ಉತ್ತರ ಕರ್ನಾಟಕದ ಅಷ್ಟೂ ಜಿಲ್ಲೆಗಳಿಂದ ಜನ ಬಂದಿದ್ರು. ಬಂದು ವಿಶ್ ಮಾಡಿ ಹೋಗಿದ್ದಾರೆ” ಎಂದಿದ್ದಾರೆ.
ಚುನಾವಣೆ ಬಳಿಕ ಮೊದಲ ಬಾರಿ ಮಂಡ್ಯಗೆ ಭೇಟಿ ನೀಡಿದ ಸುಮಲತಾ ಅವರು ಬೆನ್ನೆಲುಬಾಗಿ ನಿಂತ ಎಲ್ಲರನ್ನೂ ಸ್ಮರಿಸಿದ್ದಾರೆ. ಕಾಂಗ್ರೆಸ್ನಿಂದ ಉಚ್ಚಾಟನೆ ಆದ್ರೂ ಚುನಾವಣೆಯಲ್ಲಿ ಸಾಥ್ ನೀಡಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೂ ಧನ್ಯವಾದ ತಿಳಿಸಿದ್ದಾರೆ. ಬೆಂಬಲ ಕೊಟ್ಟ ಬಿಜೆಪಿಗೂ, ರೈತ ಸಂಘ, ದಲಿತ ಸಂಘರ್ಷ ಸಮಿತಿ, ಮುಸ್ಲಿಂ, ಕ್ರೈಸ್ತ, ಅಹಿಂದ ಸಂಘಟನೆಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಡಾ. ರವೀಂದ್ರ, ಸರ್ಕಾರಿ ನೌಕರ ವರ್ಗ, ದರ್ಶನ್, ಯಶ್ ಅಭಿಮಾನಿ ವೃಂದ, ಪ್ರಚಾರದಲ್ಲಿ ಜೊತೆಗಿದ್ದ ದೊಡ್ಡಣ್ಣ ರಾಕ್ ಲೈನ್ ವೆಂಕಟೇಶ್, ತಮ್ಮ ಪರವಾಗಿ 7ಕಿಮೀ ಪಾದಯಾತ್ರೆ ಮಾಡಿದರಿಗೂ ಧನ್ಯವಾದ ಅರ್ಪಿಸಿದ್ದಾರೆ.