ಬಾಗಲಕೋಟೆ: ಕಳೆದೊಂದು ವರ್ಷದಿಂದ ಇಲ್ಲಿ ನಾಟಕ ನಡೆಯುತ್ತಿದೆ. ಆ ನಾಟಕ ಮುಗಿಯುವ ಲಕ್ಷಣವೇ ಕಾಣುತ್ತಿಲ್ಲ. ಆ ನಾಟಕದಲ್ಲಿ ಭಾವನಾತ್ಮಕ ಆಟವೇ ನಡೀತಿದೆ. ಪ್ರತಿ 10-15 ದಿನಕ್ಕೆ ಒಂದಲ್ಲ ಒಂದೆಡೆ ನಾಟಕ. ಕಣ್ಣೀರು ಹಾಕುವ ಮೂಲಕ ಜನರ ಮುಂದೆ ನಾಟಕ. ನೀವು ಇಂಥದ್ದೇ ಸರ್ಕಾರವನ್ನು ಬಯಸಿದ್ರಾ? ಅಂತ ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.
ಬಾಗಲಕೋಟೆಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ರಾಜ್ಯದಲ್ಲಿ ಈಗಾಗಲೇ ದುರ್ಬಲ ಸರ್ಕಾರವಿದೆ. ಕೇಂದ್ರದಲ್ಲೂ ಅವರು ಅಂಥದ್ದೇ ಪ್ರಧಾನಿಯನ್ನು ಬಯಸಿದ್ದಾರೆ. ಅಧಿಕಾರದಲ್ಲಿ ಇರುವಷ್ಟು ದಿನಗಳಲ್ಲಿ ಹೆಚ್ಚು ಲೂಟಿಗೆ ಕಸರತ್ತು ನಡೆಸಿದ್ದಾರೆ. 2014 ರಲ್ಲಿ 12ಸಿಲಿಂಡರ್ ಕೊಡುವುದಾಗಿ ಕಾಂಗ್ರೆಸ್ ಮಾತುಕೊಟ್ಟಿತ್ತು. ಎಲ್ಪಿಜಿ ಸಿಲಿಂಡರ್ ಉಚಿತವಾಗಿ ನೀಡಿದ್ದು ಚೌಕಿದಾರ್. ಅಗತ್ಯಕ್ಕೆ ತಕ್ಕಂತೆ ಎಷ್ಟು ಬೇಕಾದಷ್ಟು ಸಿಲಿಂಡರ್ ಸಿಗ್ತಿವೆ. ಇದು ಪ್ರಾಮಾಣಿಕ ಮತ್ತು ಭ್ರಷ್ಟ ಸರ್ಕಾರದ ವ್ಯತ್ಯಾಸ” ಎಂದಿದ್ದಾರೆ.
“ಪಾಕಿಸ್ತಾನ ಭಾರತಕ್ಕೆ ಅಣು ಧಮಕಿ ಹಾಕಿತ್ತು. ಕಾಂಗ್ರೆಸ್ ದುರ್ಬಲ ಸರ್ಕಾರ ಈ ಬಗ್ಗೆ ಜತ್ತಿನೆಲ್ಲೆಡೆ ಗೋಳಾಡ್ತಿತ್ತು. ಆದ್ರೆ ಇವತ್ತು ಭಾರತ ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೆ. ಇವತ್ತು ಪಾಕಿಸ್ತಾನ ಜಗತ್ತಿನೆಲ್ಲೆಡೆ ಗೋಳಾಡುತ್ತ ಸಾಗ್ತಿದೆ. ಮೋದಿ ಹೊಡೆಯುತ್ತಾನೆ, ರಕ್ಷಿಸಿ ರಕ್ಷಿಸಿ ಎನ್ನುತ್ತಿದೆ ಪಾಕ್. ಇದು ಪಾಕಿಸ್ತಾನದ ಪರಿಸ್ಥಿತಿ” ಎಂದು ಮೋದಿ ಲೇವಡಿ ಮಾಡಿದ್ದಾರೆ.
“ಕಾಂಗ್ರೆಸ್ ಜೆಡಿಎಸ್ನಂಥ ಪಕ್ಷಗಳ ಬಗ್ಗೆ ಭಾರತಕ್ಕೆ ಅರಿವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಧರ್ಮ ಒಡೆಯಲು ಯತ್ನಿಸಿದ್ರು. ಲಿಂಗಾಯತ ಸಮುದಾಯ ಒಡೆಯಲು ಸಚಿವರೇ ಯತ್ನಿಸಿದ್ರು. ಈಗ್ಲೂ ಅದೇ ವಿಚಾರಕ್ಕೆ ಸಚಿವರು ಕಚ್ಚಾಡ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಬೇರೆ ಪ್ರಧಾನಿ ಬೇಕು ಎನ್ನುತ್ತಾರೆ. ದೇಶದಲ್ಲಿ ಇಬ್ಬರು ಪ್ರಧಾನಮಂತ್ರಿಗಳು ಬೇಕಾ”? ಎಂದು ಪ್ರಶ್ನಿಸಿದ್ದಾರೆ.