ದೇಶದಕ 95 ಲೋಕಸಭಾ ಕ್ಷೇತ್ರದಲ್ಲಿಂದು ಮತ ಸಂಭ್ರಮ. ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಈ ನಡುವೆ ಕೆಲವು ಕಡೆಗಳಲ್ಲಿ ಮತಯಂತ್ರಗಳು ಕೈ ಕೊಟ್ಟಿವೆ.
ಮೈಸೂರು: ಚಾಮರಾಜನಗರ ಕ್ಷೇತ್ರದ, ಮತಗಟ್ಟೆ ಸಂಖ್ಯೆ 230 (ದೇವರಾಜ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಮತಕೇಂದ್ರ) ರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
ಕೋಲಾರ: ಇಲ್ಲಿ ಮೂರು ಮತಗಟ್ಟೆಗಳಲ್ಲಿ ಮತಯಂತ್ರಗಳು ಕೈಕೊಟ್ಟಿವೆ. ಮಾಲೂರು ತಾಲೂಕಿನ ದೊಡ್ಡಶಿವಾರ ಮತಗಟ್ಟೆ ಸಂಖ್ಯೆ – 30, ದೊಡ್ಡ ಕಡತೂರು ಮತಗಟ್ಟೆ ಸಂಖ್ಯೆ – 38, ತಂಬಿಹಳ್ಳಿ ಮತಗಟ್ಟೆ ಸಂಖ್ಯೆ – 08ರಲ್ಲಿ ದೋಷ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಚುನಾವಣಾಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಉಡುಪಿ: ಪಡುಬಿದ್ರಿ ಕಂಚಿನಡ್ಕ ಬೂತ್ನಲ್ಲಿಯೂ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದು, ಮತದಾನ ವಿಳಂಬವಾಗಿದೆ. ಬೆಂಗಳೂರಿನ ಪುಟ್ಟೇನಹಳ್ಳಿ, ದಾಸರಹಳ್ಳಿಯಲ್ಲೂ ಮತಯಂತ್ರಗಳು ಕೈಕೊಟ್ಟಿದ್ದು, ಮತದಾನ ಪ್ರಕ್ರಿಯೆ ತಡವಾಗುತ್ತಿದೆ.
ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅಳಿಲುಘಟ್ಟದಲ್ಲಿ ಮತಗಟ್ಟೆ ಸಂಖ್ಯೆ 46, 47 ರಲ್ಲಿಯೂ ಕೈ ಕೊಟ್ಟಿದೆ.
ಮಂಡ್ಯ: ರಾಜ್ಯದಲ್ಲಿಯೇ ಎಲ್ಲರ ಗಮನಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿಯೂ ಮತಯಂತ್ರ ಕೈ ಕೊಟ್ಟಿದೆ. ಗಾಂಧಿನಗರದ ಮತಗಟ್ಟೆ ಸಂಖ್ಯೆ 177ರಲ್ಲಿ ದೋಷ ಕಾಣಿಸಿಕೊಂಡಿದ್ದು, ಒಂದು ಗಂಟೆ ತಡವಾಗಿ ಮತದಾನ ಆರಂಭವಾಗಿದೆ.
ಚಾಮರಾಜನಗರ: ಮತಯಂತ್ರ ಕೈ ಕೊಟ್ಟಿದ್ದು ಮತ ಚಲಾಯಿಸಲು ಸಿ.ಪುಟ್ಟರಂಗಶೆಟ್ಟಿ ಒಂದು ಗಂಟೆಗೂ ಹೆಚ್ಚು ಕಾಲ ಕಾದಿದ್ದಾರೆ. ಉಪ್ಪಿನಮೋಳೆಯಲ್ಲಿರುವ ಮತಗಟ್ಟೆ ಸಂಖ್ಯೆ 218ರಲ್ಲಿ ಇವಿಎಂನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.
ಆನೇಕಲ್: ಇಲ್ಲಿ ಮತದಾನ ತಡವಾಗಿ ಆರಂಭವಾಗಿದ್ದು, ಇವಿಎಂ ಕೈ ಕೊಟ್ಟು 336ರ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ನಿಗದಿತ ಸಮಯದಲ್ಲಿ ಆರಂಭವಾಗಿಲ್ಲ. ಪ್ರದೇಶದಲ್ಲಿ ನಿಯೋಜಿತರಾಗಿದ್ದ ಪೊಲೀಸ್ ಸಿಬ್ಬಂದಿ ಮಾಧ್ಯಮದವರ ಮೇಲೆ ಹಲ್ಲೆಗೆ ಮುಂದಾದ ಘಟನೆ ನಡೆದಿದೆ.
ಹಾಸನ: ಕಟ್ಟೆಪುರ ಮತ ಕೇಂದ್ರದಲ್ಲಿ ಇವಿಎಂ ಪ್ಯಾಡ್ನಲ್ಲಿ ದೋಷ ಕಂಡುಬಂದಿದೆ. 7 ಮತಗಳಿಗೆ ಮೂರು ಮತಗಳು ಹೆಚ್ಚುವರಿಯಾಗಿ ಜೆಡಿಎಸ್ಗೆ ಸೇರ್ಪಡೆಯಾಗುತ್ತಿವೆ. ಮತಯಂತ್ರದ ದೋಷದ ಬಗ್ಗೆ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಹಾಸನದ ಅರಕಲಗೂಡು ವಿಧಾನಸಭಾ ಕ್ಷೇತ್ರದ ಕಟ್ಟೆಪುರದಲ್ಲಿ ಘಟನೆ ನಡೆದಿದ್ದು, ಇವಿಎಂ ದೋಷವಿರುವ ಮತಗಟ್ಟೆಯಲ್ಲಿ ಮತಹಾಕದಂತೆ ಬಿಜೆಪಿ ಅಭ್ಯರ್ಥಿ ಎ.ಮಂಜು ಮನವಿ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರಿಂದ ಮತಗಟ್ಟೆಯ ಸಮೀಪ ಪ್ರತಿಭಟನೆ ನಡೆದಿದೆ.