ಲಖನೌ: ಕೇರಳದ ವಯನಾಡ್ನಿಂದ ಸ್ಪರ್ಧೆಗಿಳಿದಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಇಂದು ತಮ್ಮ ಹಾಲಿ ಕ್ಷೇತ್ರ ಅಮೇಥಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಐದನೇ ಹಂತದಲ್ಲಿ ಮತದಾನ ನಡೆಯುವ ಹಿನ್ನಲೆ ನಾಮಪತ್ರ ಸಲ್ಲಿಸಲು ಇದೇ ಹದಿನೆಂಟರಂದು ಕೊನೆಯ ದಿನವಾಗಿದೆ. ಹಲವು ರಾಜ್ಯಗಳಲ್ಲಿ ಪ್ರಚಾರ ಮತ್ತು ಸಮಾವೇಶ ಹಮ್ಮಿಕೊಂಡಿರುವ ಕಾರಣ ಅವಧಿಗೂ ಮುಂಚಿತವಾಗಿ ನಾಮಪತ್ರ ಸಲ್ಲಿಸಲು ರಾಹುಲ್ ಗಾಂಧಿ ನಿರ್ಧರಿಸಿದ್ರು. ಇಂದು ನಾಮಪತ್ರ ಸಲ್ಲಿಕೆ ಹಿನ್ನಲೆ, ಪೂರ್ವ ಉತ್ತರ ಪ್ರದೇಶದ ಉಸ್ತುವಾರಿಯಾಗಿರುವ ಸಹೋದರಿ ಪ್ರಿಯಾಂಕ ವಾದ್ರ ಮತ್ತು ಸಂಸದ ಜ್ಯೋತಿರಾಧಿತ್ಯ ಸಿಂದ್ಯಾ ರಾಹುಲ್ಗೆ ಸಾಥ್ ನೀಡಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ಅಮೇಥಿಯ ಮುನ್ಸಿಗಂಜ್ ನಿಂದ ರೋಡ್ ಶೋ ಆರಂಭವಾಗಿ ವಿಶಾಲ್ ಮಾರ್ಟ್, ಬಚಾಪನ್ ಸ್ಕೂಲ್ ಮಾರ್ಗವಾಗಿ ತೆರಳಿ ಅಮೇಥಿಯ ಜಿಲ್ಲಾಧಿಕಾರಿ ಕಛೇರಿ ತಲುಪಲಿದೆ. ನಂತರ ಜಿಲ್ಲಾಧಿಕಾರಿ ಸಮ್ಮುಖದಲ್ಲಿ 12 ಗಂಟೆಗೆ ತಮ್ಮ ಉಮೇದುವಾರಿಕೆಯನ್ನು ರಾಹುಲ್ ಗಾಂಧಿ ಸಲ್ಲಿಸಲಿದ್ದಾರೆ. ಇದಾದ ಬಳಿಕ ಬಿಹಾರ ಮತ್ತು ಪಶ್ಚಿಮ ಬಂಗಾಳದ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡು ಚುನಾವಣಾ ಭಾಷಣ ಮಾಡಲಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಮತ್ತು ವಯನಾಡ್ ಕ್ಷೇತ್ರಗಳನ್ನು ಆರಿಸಿಕೊಂಡಿರುವ ರಾಹುಲ್ ಗಾಂಧಿ, ಎರಡು ಕ್ಷೇತ್ರದ ಮತದಾರರ ಮನ ಮತ್ತು ಮತ ಗಳಿಸುವಲ್ಲಿ ಯಶಸ್ವಿಯಾಗ್ತಾರಾ ಅಂತಾ ಕಾದುನೋಡಬೇಕಿದೆ.