ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಲೋಕಸಮರದ ರಣಕಹಳೆ ಮೊಳಗಿಸಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದೊಂದು ಮತದ ತಾಕತ್ತು ಎಂದರೆ ಇಂದು ಜಗತ್ತಿನ ಎಲ್ಲೆಡೆ ಭಾರತದ ಜೈಘೋಷ ಹೊಮ್ಮುತ್ತಿದೆ. 5 ವರ್ಷಗಳ ಹಿಂದೆ ಪಾಕ್ ಉಗ್ರರು ನಮ್ಮ ಮೇಲೆ ದಾಳಿ ಮಾಡ್ತಿದ್ರು. ಆ ನಂತರ ಪಾಕಿಸ್ತಾನ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿತ್ತು . ಆದ್ರೆ ಈ ಚೌಕಿದಾರ್ ಅಂತಹ ಪರಿಸ್ಥಿತಿ ಬದಲಿಸಿದ್ದಾರೆ. ಪಾಕ್ ಉಗ್ರರ ಮೇಲೆ ದಾಳಿ ನಡೆಸಿದ್ದು ಎಲ್ರಿಗೂ ಹೆಮ್ಮೆ ತಂದಿದೆ. ಅದು ಪಾಕಿಸ್ತಾನಕ್ಕೆ ಗಾಯ ಮಾಡಿದ್ರೆ, ಕಾಂಗ್ರೆಸ್ ಕಣ್ಣಲ್ಲಿ ನೀರು ಬಂತು ಎಂದಿದ್ದಾರೆ.
“ಏರ್ಸ್ಟ್ರೈಕ್ ನಡೆದಾಗ ಇಡೀ ಜಗತ್ತು ಭಾರತದ ಪರವಾಗಿ ನಿಂತಿತು. ಆದ್ರೆ, ಕಾಂಗ್ರೆಸ್ ಪಕ್ಷ ಪಾಕ್ ಪರವಾಗಿ ನಿಂತುಕೊಂಡಿದೆ. ಏರ್ ಸ್ಟ್ರೈಕ್ನಂತೆ ಅಂತರಿಕ್ಷ ಸ್ಟ್ರೈಕ್ ಬಗ್ಗೆಯೂ ನಿಂದಿಸಿದ್ರು. ಮೋದಿ ವಿರೋಧಿ ಗುಂಗಿನಲ್ಲಿ ಭಾರತವನ್ನೇ ವಿರೋಧ ಮಾಡ್ತಿದ್ದಾರೆ. ಇಲ್ಲಿಯ ಮುಖ್ಯಮಂತ್ರಿ ಕೂಡ ಅದರಲ್ಲಿ ಭಾಗಿ ಆಗಿದ್ದಾರೆ. ಇವರ ಸರ್ಕಾರ ಇದ್ದಾಗ ಮಿಸೈಲ್ ಉಡಾವಣೆಗೂ ಅನುಮತಿ ಕೊಟ್ಟಿಲ್ಲ” ಎಂದರು.
“ನೀವು ಈಗ ಪ್ರಧಾನಿ ಆಯ್ಕೆ ಮಾಡುವುದು ಮಾತ್ರವಲ್ಲ, ಪೂರ್ಣ ಬಹುಮತದ ಸರ್ಕಾರವನ್ನು ಆಯ್ಕೆ ಮಾಡ್ಬೇಕು. ರಾಜ್ಯದ ದೋಸ್ತಿ ಸರ್ಕಾರ ಕಲಸು ಮೇಲೋಗರ ಆಗಿದೆ. ಇಲ್ಲಿ ಕೆಲವರು ಓಡಿ ಹೋಗ್ತಾರೆ, ಅಲ್ಲಿ ಕೆಲವರು ಓಡಿ ಹೋಗ್ತಾರೆ. ಪ್ರಧಾನಿಗೆ 130 ಕೋಟಿ ಜನ ಹೈಕಮಾಂಡ್ ಆಗಿರ್ಬೇಕು. ಪ್ರತಿ ಕುಟುಂಬಕ್ಕೂ ಒಂದು ಮನೆ ಕೊಡುವುದು, ಪ್ರತಿ ಕುಟುಂಬಕ್ಕೂ ವಿದ್ಯುತ್, ಗ್ಯಾಸ್ ಸಂಪರ್ಕ ಕಲ್ಪಿಸುವುದು, ಪ್ರತಿ ಗ್ರಾಮ ಪಂಚಾಯತ್ನಲ್ಲಿ ಹೆಲ್ತ್ ಸೆಂಟರ್ ಸ್ಥಾಪನೆ, ಕೃಷಿಕರ ಆದಾಯ ದ್ವಿಗುಣ ಮಾಡುವುದು ನಮ್ಮ ಸಂಕಲ್ಪ” ಎಂದು ಹೇಳಿದರು.
“ದಾವಣಗೆರೆ ಸ್ಮಾರ್ಟ್ ಸಿಟಿ ಮಾಡಲು ನಾವು ಬದ್ಧರಾಗಿದ್ದೇವೆ. ಎಥೆನಾಲ್ ರಾಸಾಯನಿಕ ಘಟಕಗಳ ಸ್ಥಾಪನೆ ನಮ್ಮ ಗುರಿಯಾಗಿದೆ. 3 ಕೋಟಿ ರೈತರ ಖಾತೆಗೆ ನೇರವಾಗಿ ಹಣ ಜಮಾ ಆಗಿದೆ. ಇನ್ನೂ ಒಂದೂವರೆ ಕೋಟಿ ರೈತರ ಖಾತೆಗೆ ಹಣ ಜಮಾ ಆಗಲಿದೆ. ಕರ್ನಾಟಕದ 75 ಲಕ್ಷ ರೈತರಿಗೂ ಯೋಜನೆಯ ಲಾಭ ಸಿಗಲಿದೆ. ದೋಸ್ತಿ ಸರ್ಕಾರ ನೀಡಿದಂತೆ ರೈತರಿಗೆ ಅನುಕೂಲ ಆಗಿದೆಯಾ? ಇವರಿಗೆ ಕೆಲಸ ಮಾಡುವ ನಿಯತ್ತು ಇದ್ರೆ ಕಾಟನ್ ಸಿಟಿ, ಮ್ಯಾಂಚೆಸ್ಟರ್ ಎಂದು ಫೇಮಸ್ಸಾಗಿದ್ದ ದಾವಣಗೆರೆ ಬಣಗುಡ್ತಿರಲಿಲ್ಲ” ಎಂದರು.
“ಕಾಂಗ್ರೆಸ್ ಪಕ್ಷ ದೇಶದ ನಾಲ್ಕು ತಲೆಮಾರುಗಳಿಗೆ ಅನ್ಯಾಯ ಎಸಗಿದೆ. ಜನರ ಮಧ್ಯೆ ಗೊಂದಲ ಸೃಷ್ಟಿಸಿ, ವಿದೇಶಿ ನೀತಿ ದುರ್ಬಲ ಮಾಡಿದೆ. ಭಾರತದ ಸೇನೆಯನ್ನೂ ದುರ್ಬಲ ಮಾಡಿ ಅನ್ಯಾಯ ಎಸಗಲಾಗಿದೆ. 70 ವರ್ಷಗಳ ಕಾಲ ಅನ್ಯಾಯ ಮಾಡಿದವ್ರಿಗೆ ಪಾಠ ಕಲಿಸಬೇಕಲ್ವಾ? ಸಿಖ್ ಗಲಭೆ ಮಾಡಿದವರು, ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭ್ರಷ್ಟಾಚಾರ, ಸಾಲ ಮನ್ನಾದಲ್ಲಿ ಭ್ರಷ್ಟಾಚಾರ, 2 ಜಿ ಭ್ರಷ್ಟಾಚಾರ, ಹೆಲಿಕಾಪ್ಟರ್ ಭ್ರಷ್ಟಾಚಾರ ಮಾಡಿದವರ ವಿರುದ್ಧ ನ್ಯಾಯ ಸಿಗಲಿದೆ. 21ನೇ ಶತಮಾನದ ಯುವ ಮತದಾರರು ಕಾಂಗ್ರೆಸ್ಗೆ ಶಿಕ್ಷೆ ನೀಡಲಿದ್ದಾರೆ. ಮೊದಲು ಮತದಾನ ಮಾಡುವವರು ಯೋಚಿಸಿ ಮತ ಹಾಕಿ. ದೇಶದಲ್ಲಿ ಬಲಿಷ್ಠ ಸರ್ಕಾರ ನಿರ್ಮಿಸುವುದು ನಿಮ್ಮ ಹಕ್ಕು” ಎಂದು ಮತಯಾಚಿಸಿದರು.