ಉಡುಪಿ: ಸಹೋದರ ರೇವಣ್ಣ ಅವರಂತೆ ಮುಖ್ಯಮಂತ್ರಿ ಕುಮಾರ ಸ್ವಾಮಿಯವರೂ ಕೂಡ ದೈವ ದೇವರು ಜ್ಯೋತಿಷ್ಯದಲ್ಲಿ ಸಾಕಷ್ಟು ನಂಬಿಕೆ ಇರಿಸಿಕೊಂಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ನಿನ್ನೆ ರಾತ್ರಿ ಆಚಾನಕ್ ಆಗಿ ಕುಂದಾಪುರದ ಸೌಕೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ದೇವರ ದರ್ಶನ ಪಡೆದು, ಸೌಕೂರು ಬೀದಿ ಮನೆಯ ಜ್ಯೋತಿಷಿ ಸೊಕ್ಕೊಟ್ಟು ಮಂಜುನಾಥಯ್ಯ ಹೆಬ್ಬಾರ್ ಅವರನ್ನು ಭೇಟಿ ಮಾಡಿದ್ದಾರೆ.
ಶ್ರೀ ದುರ್ಗಾಪರಮೇಶ್ವರಿ ದೇವಿಗೆ ತಂದೆ, ತಾಯಿ, ಮಗ ನಿಖಿಲ್, ಅಣ್ಣನ ಮಗ ಪ್ರಜ್ವಲ್ ಹೆಸರಿನಲ್ಲಿ ಸಂಕಲ್ಪ ಮಾಡಿ ವಿಶೇಷ ಪೂಜೆ ಸಲ್ಲಿಸಿ ಮುಂಬರುವ ಚುನಾವಣೆಯಲ್ಲಿ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಂಗಳೂರಿನ ಪ್ರಸಿದ್ಧ ಜ್ಯೋತಿಷಿ ರಾಜಗುರು ದ್ವಾರಕನಾಥ ನಿರ್ದೇಶನದ ಮೇರೆಗೆ ಸೊಕ್ಕೊಟ್ಟು ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. 34 ವರ್ಷದ ಹಿಂದೆ ದೇವೇಗೌಡ ಅವರು ಕೂಡ ಸೌಕೂರಿಗೆ ಭೇಟಿ ನೀಡಿ ಸೊಕ್ಕೊಟ್ಟು ಮಂಜುನಾಥಯ್ಯ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಸದ್ಯ ಮಗ ಕುಮಾರಸ್ವಾಮಿಯೂ ಭೇಟಿ ನೀಡಿರುವುದು ಕೂತೂಹಲ ಮೂಡಿಸಿದೆ. ಒಟ್ಟಿನಲ್ಲಿ ಅತ್ತ ಅಣ್ಣ ರೇವಣ್ಣ ಕೈಯಲ್ಲಿ ಲಿಂಬೆಹಣ್ಣು ಹಿಡಿದು ತಿರುಗಿದರೆ ಇತ್ತ ಕುಮಾರಸ್ವಾಮಿ ಅವರು ಜ್ಯೋತಿಷಿಗಳ ಮೊರೆ ಹೋಗಿದ್ದಾರೆ.