ಹುಬ್ಬಳ್ಳಿ: ಧಾರವಾಡದ ಟಿಕೆಟ್ ಗೊಂದಲ ನಿವಾರಣೆಯಾಗುತ್ತೆ. ಸಂಜೆ ವೇಳೆಗೆ ಅಭ್ಯರ್ಥಿ ಆಯ್ಕೆಯನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಅವರು, “ಹೈಕಮಾಂಡ್ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆಂಬ ವಿಶ್ವಾಸ ಇದೆ. ನಮ್ಮ ಅಭಿಪ್ರಾಯವನ್ನು ಹೈಕಮಾಂಡ್ಗೆ ತಿಳಿಸಿದ್ದೇವೆ” ಅಂತ ಹೇಳಿದ್ದಾರೆ. ಶಾಕೀರ್ ಸನದಿಗೆ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ. ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆಂಬಲಿಗರು ಅಲ್ಪಸಂಖ್ಯಾತರನ್ನು ಟಿಕೆಟ್ ನೀಡದೇ ಕಡೆಗಣಿಸಿದ್ರೆ ತಕ್ಕ ಪಾಠ ಕಲಿಸೋದಾಗಿ ಎಚ್ಚರಿಸಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಶಾಕೀರ್ ಸನದಿ ಈ ಬಗ್ಗೆ ಪ್ರತಿಕ್ರಿಯಿಸಿ, “ನಾನು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ನನಗೆ ಟಿಕೆಟ್ ಕೊಡ್ತಾರೆ ಎನ್ನುವ ವಿಶ್ವಾಸ ಇದೆ. ಸ್ಥಳೀಯರಿಗೆ ನನ್ನ ಪರಿಚಯ ಇಲ್ಲ ಅನ್ನೋದು ತಪ್ಪು ಕಲ್ಪನೆ. ರಾಜ್ಯದಲ್ಲಿ 2 ಕ್ಷೇತ್ರ ಅಲ್ಪಸಂಖ್ಯಾತರಿಗೆ ಮೀಸಲು ಇದೆ. ಹೀಗಾಗಿ ನನಗೆ ಟಿಕೆಟ್ ನೀಡ್ತಾರೆ ಎನ್ನುವ ವಿಶ್ವಾಸ ಇದೆ” ಅಂತ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.
ಧಾರವಾಡ ಕ್ಷೇತ್ರದ ಮತ್ತೋರ್ವ ಪ್ರಬಲ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ವಿನಯ್ ಕುಲಕರ್ಣಿ ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿ, “ಸಿದ್ದರಾಮಯ್ಯ ಅವರ ಜೊತೆ ಮುಖಂಡರು ಮಾತನಾಡಿದ್ದಾರೆ. ಚುನಾವಣೆ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿದ್ದೇನೆ. ಯಾಕೆ ಟಿಕೆಟ್ ವಿಳಂಬವಾಗ್ತಿದೆ ಎಂಬುದು ಗೊತ್ತಿಲ್ಲ. ನಾನು ಪಕ್ಷೇತರನಾಗಿ ನಿಲ್ಲುವುದು ಅಸಾಧ್ಯವೇನಲ್ಲ. ಈ ಹಿಂದೆ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು ಬಂದಿದ್ದೇನೆ” ಅಂತ ಕಾಂಗ್ರೆಸ್ ವರಿಷ್ಠರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.