Monday, April 28, 2025

‘ಮುತ್ತಿನಹಾರ’ ಶೂಟಿಂಗ್​; ದೆಹಲಿವರೆಗೂ ಬಂದು ಕಾಶ್ಮೀರಕ್ಕೆ ಬರೋದಿಲ್ಲ ಎಂದಿದ್ದ ನಟಿ ಸುಹಾಸಿನಿ

ಪೆಹಲ್ಗಾಮ್‌ನಲ್ಲಿ ಉಗ್ರರು 28 ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿದ ಘೋರ ಕೃತ್ಯ ಕಹಿ ನೆನಪಿನಿಂದ ಇನ್ನೂ ಹೊರ ಬಂದಿಲ್ಲ. ಪ್ರತಿಯೊಬ್ಬ ಭಾರತೀಯನಲ್ಲೂ ಆಕ್ರೋಶದ ಕಿಚ್ಚು ಇನ್ನೂ ಆರಿಲ್ಲ. ಉಗ್ರರ ಕೃತ್ಯಕ್ಕೆ ಇಡೀ ವಿಶ್ವವೇ ವಿರೋಧ ವ್ಯಕ್ತಪಡಿಸಿದೆ. ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ಕಾಶ್ಮೀರವೀಗ ಬಿಕೋ ಎನ್ನುತ್ತಿದೆ.

ಕಾಶ್ಮೀರ ಕೇವಲ ಪ್ರವಾಸಿಗರಿಗಷ್ಟೇ ನೆಚ್ಚಿನ ತಾಣವಲ್ಲ. ಇದು ಸಿನಿಮಾ ಮಂದಿಗೂ ಅಷ್ಟೇ ಅಚ್ಚುಮೆಚ್ಚು. ಹಲವು ವರ್ಷಗಳಿಂದ ಕಾಶ್ಮೀರದ ಬೇರೆ ಬೇರೆ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಬಾಲಿವುಡ್‌ ಸಿನಿಮಾಗಳ ಜೊತೆಗೆ ಕನ್ನಡದ ಸಿನಿಮಾ ಕೂಡ ಚಿತ್ರೀಕರಣಗೊಂಡಿದೆ. ಅದರಲ್ಲಿ ವಿಷ್ಣುವರ್ಧನ್ ನಟನೆಯ ‘ಮುತ್ತಿನಹಾರ’ ಸಿನಿಮಾ ಕೂಡ ಒಂದು. ಈ ಸಿನಿಮಾವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದರು.

‘ಮುತ್ತಿನಹಾರ’ ಸಿನಿಮಾವನ್ನು ಇದೇ ಪೆಹಲ್ಗಾಮ್‌ನಿಂದ ಕೆಲವೇ ಅಂತರದ ದೂರದಲ್ಲಿ ಶೂಟಿಂಗ್ ಮಾಡಲಾಗಿತ್ತು. ಆ ವೇಳೆ ಕೂಡ ಭಯೋತ್ಪಾದಕರ ಭೀತಿಯಲ್ಲಿಯೇ ಚಿತ್ರೀಕರಣ ನಡೆದಿತ್ತು. ಭಾರತೀಯ ಸೇನೆ ಕನ್ನಡ ಸಿನಿಮಾದ ಚಿತ್ರೀಕರಣ ಸಂಪೂರ್ಣ ಸಹಕಾರ ನೀಡಿತ್ತು. ಆದರೆ, ಈ ಸಿನಿಮಾದಲ್ಲಿ ನಟಿಸುತ್ತಿದ್ದ ಸುಹಾಸಿನಿ ದೆಹಲಿವರೆಗೂ ಬಂದು ಕಾಶ್ಮೀರಕ್ಕೆ ಬರುವುದಕ್ಕೆ ಹಿಂದೇಟು ಹಾಕಿದ್ದರು. ಆಮೇಲೆ ಏನಾಯ್ತು? ಕಾಶ್ಮೀರಕ್ಕೆ ಹೇಗೆ ಕರೆದುಕೊಂಡು ಬಂದರು? ಮುಂದೆ ಓದಿ.

ರಾಜೇಂದ್ರ ಸಿಂಗ್ ಬಾಬು ‘ಮುತ್ತಿನಹಾರ’ ಸಿನಿಮಾವನ್ನು ಸುಮಾರು 40 ದಿನಗಳ ಕಾಲ ಕಾಶ್ಮೀರದ ಸೂಕ್ಷ್ಮ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿದ್ದರು. ಸುಮಾರು 120 ಜನರನ್ನು ಕರೆದುಕೊಂಡು ಚಿತ್ರೀಕರಣಕ್ಕೆ ಹೋಗಿದ್ದರು. ಮೊದಲೇ ರಾಜೇಂದ್ರ ಸಿಂಗ್ ಬಾಬು ಹಾಗೂ ವಿಷ್ಣುವರ್ಧನ್ ಇಬ್ಬರೂ ಕಾಶ್ಮೀರದ ಶೂಟಿಂಗ್ ಸ್ಪಾಟ್‌ಗೆ ಹೋಗಿದ್ದರು. ಆನಂತರ ತಂಡವನ್ನು ಕರೆಸಿಕೊಂಡಿದ್ದರು. ಸುಹಾಸಿನಿ ಕೂಡ ತಡವಾಗಿ ಬಂದು ತಂಡವನ್ನು ಸೇರಿಕೊಂಡಿದ್ದರು. ಆದರೆ, ದೆಹಲಿ ಬಂದವರು ಕಾಶ್ಮೀರಕ್ಕೆ ಬರುವುದಿಲ್ಲ ಎಂದು ಹಠ ಹಿಡಿದಿದ್ದರು. ಆ ಮೇಲೆ ಏನಾಯ್ತು ಅನ್ನೋದನ್ನು ಪವರ್‌ ಟಿವಿಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

“ನಾನು ವಿಷ್ಣುವರ್ಧನ್ ಮೊದಲು ಹೋದ್ವಿ. ಹೋದಾಗ ಮೊದಲು ಎರಡು ಗಂಟೆ ನಮ್ಮನ್ನ ನಿಲ್ಲಿಸಿದ್ದರು. ಬೇಡ ಏನೋ ಟೆರರಿಸ್ಟ್ ಮೂಮ್ಮೆಂಟ್ ಆಗುತ್ತಿದೆ ಅಂತ. ನಾವು 120 ಜನರು ಇದ್ವಿ. ಆ ಮೇಲೆ ಅವರು ಏನೂ ಸಿಗ್ನಲ್ ಇಲ್ಲಾ ಎಂದು ಕ್ಲಿಯರ್ ಮಾಡಿ ಕೊಟ್ಟರು. ಸುಹಾಸಿನಿ ಬರುವಾಗ ಸ್ಟ್ರಕ್ ಅಪ್‌ ಆದರು. ಸುಹಾಸಿನಿ ದೆಹಲಿಯಿಂದ ನನಗೆ ಫೋನ್ ಮಾಡಿದರು. ಆಗೆಲ್ಲ ಮೊಬೈಲ್ ಫೋನ್ ಇರಲಿಲ್ಲ. ಲ್ಯಾಂಡ್ ಲೈನ್‌ನಿಂದಲೇ ಮಾಡಬೇಕಿತ್ತು. ನನಗೆ ಫೋನ್ ಮಾಡಿ ಮನೆಯಲ್ಲಿ ಬಿಡುತ್ತಿಲ್ಲ. ನಾನು ವಾಪಸ್ ಹೋಗಬೇಕಾಗುತ್ತೆ. ಟೆರರಿಸ್ಟ್ ಇರುತ್ತಾರೆ ಬರೋದಿಲ್ಲ ಅಂತ ಹೇಳಿದರು. ಕೊನೆಯ ಅವರಿಗೆ ಆರ್ಮಿಯವರಿಂದ ಮಾತಾಡಿಸಿ, ನಿಮಗೆ ಸಂಪೂರ್ಣ ರಕ್ಷಣೆ ಕೊಡುತ್ತೇವೆ ಅಂತ ಹೇಳಿ ಕರೆದುಕೊಂಡು ಬಂದೆವು.” ಎಂದು ಆ ದಿನದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

‘ಮುತ್ತಿನಹಾರ’ ಸಿನಿಮಾವನ್ನು ಚಿತ್ರೀಕರಣ ಕಷ್ಟಕರವಾಗಿತ್ತು. ಅಲ್ಲಿನ ವಾತಾವರಣ ಒಂದೆಡೆಯಾದರೆ, ಇನ್ನೊಂದು ಕಡೆ ಭಯೋತ್ಪಾದಕರ ಯಾವಾಗ ಏನು ಮಾಡುತ್ತಾರೋ ಅನ್ನೋ ಭಯವಿರುತ್ತಿತ್ತು. ಆದರೆ, ಭಾರತೀಯ ಸೇನೆ ಈ ಸಿನಿಮಾಗೆ ಸಂಪೂರ್ಣ ಸಹಕಾರವನ್ನು ಕೊಟ್ಟಿತ್ತು. ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾವನ್ನು ಅನಂತ್‌ನಾಗ್‌ ನಿಂದ 40 ಕಿಲೋ ಮೀಟರ್ ದೂರದಲ್ಲಿ ಶೂಟ್ ಮಾಡುತ್ತಿದ್ದರು. ಆರ್ಮಿ ಕ್ಯಾಂಪ್ ಒಳಗೆ ಇದ್ದಿದ್ದರಿಂದ ಅಷ್ಟೇನು ಭಯವಿರಲಿಲ್ಲ. ಆದರೆ, ಸುತ್ತಮುತ್ತ ಶೂಟಿಂಗ್‌ಗೆ ಹೋಗಬೇಕಾದರೆ, ಎಚ್ಚರಿಕೆ ತೆಗೆದುಕೊಂಡಿದ್ದರು. ಶೂಟಿಂಗ್‌ಗೆ ತೆರಳುವುದಕ್ಕೂ ಮೊದಲೇ ಅಲ್ಲಿ ಇಂಟಲಿಜೆನ್ಸ್ ಕಳಿಸಿ, ರಿಪೋರ್ಟ್ ತೆಗೆದುಕೊಂಡು ಆ ಬಳಿಕ ಶೂಟಿಂಗ್ ಮಾಡುತ್ತಿದ್ದರು.

ಮುತ್ತಿನಹಾರ ಶೂಟ್ ಮಾಡುವಾಗ ವಿಷ್ಣುದಾದ ಸಿಕ್ಕಾಪಟ್ಟೆ ಧೈರ್ಯ ತುಂಬಿದ್ದನ್ನು ರಾಜೇಂದ್ರ ಸಿಂಗ್ ಬಾಬು ನೆನಪಿಸಿಕೊಂಡಿದ್ದಾರೆ.”ವಿಷ್ಣುವರ್ಧನ್ ಅವರು ಏನೂ ಆಗಲ್ಲ ಅಂತ ಧೈರ್ಯ ಹೇಳುತ್ತಿದ್ದರು. ಅಲ್ಲೊಂದು ದುರ್ಗೆ ಟೆಂಪಲ್ ಇತ್ತು. ಪ್ರತಿ ದಿನ ಅಲ್ಲಿಗೆ ಹೋಗಿ ಒಂದು ಪೂಜೆ ಮಾಡಿಸಿಕೊಂಡು ಪ್ರಸಾದ ತೆಗೆದುಕೊಂಡು ಬರೋದು ರೂಢಿಯಾಗಿತ್ತು. 40 ದಿನ ಅಲ್ಲಿ ಇದ್ವಿ. ಆರಾಮಾಗಿ ಶೂಟಿಂಗ್ ಮುಗಿಸಿಕೊಂಡು ಬಂದ್ವಿ.” ಎಂದು ರಾಜೇಂದ್ರ ಸಿಂಗ್ ಬಾಬು ಶೂಟಿಂಗ್‌ನ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES