ಶಿವಮೊಗ್ಗ : ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಕಾಶಿದಾರ ಹಾಗೂ ಗಾಯಿತ್ರಿ ದೀಕ್ಷೆ ಪಡೆದ ಜನಿವಾರವನ್ನು ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರ ತಲೆದಂಡವಾಗಿದೆ. ಆದರೆ, ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರವಾದಂತಾಗಿದ್ದು, ಸೂಚನೆ ನೀಡಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಇಲ್ವಾ? ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ಶಿವಮೊಗ್ಗ ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹೋಂಗಾರ್ಡ್ಗಳನ್ನು ಅಮಾನತು ಮಾಡಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, ಏನಿವಾಗ? : ಅನುರಾಗ್ ಕಶ್ಯಪ್ ವಿವಾದಾತ್ಮಕ ಪೋಸ್ಟ್
ಹೌದು, ಇಡೀ ದೇಶದ ಗಮನ ಸೆಳೆದ ಸಿಇಟಿ ಪರೀಕ್ಷೆ ವೇಳೆ ಕೈಗೆ ಕಟ್ಟಿದ್ದ ಕಾಶಿದಾರ ಹಾಗೂ ಜನಿವಾರ ತೆಗೆಸಿರುವ ವಿಚಾರಕ್ಕೆ ಸಂಬಂಧ ಇಬ್ಬರ ತಲೆದಂಡವಾಗಿದೆ. ಗೃಹ ರಕ್ಷಕ ದಳದ ಕಮಾಂಡೆಂಟ್ ಹೋಂಗಾರ್ಡ್ ಆಗಿರುವ ರಘು ಡಿ. ಹಾಗೂ ಕಲಾವತಿ ಎಂ. ಎಂಬುವವರನ್ನು ಅಮಾನತು ಮಾಡಲಾಗಿದೆ. ಆದರೆ, ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತಾಗಿದ್ದು, ಈ ಇಬ್ಬರು ಹೋಂ ಗಾರ್ಡ್ಸ್ ತಿಳುವಳಿಕೆಯ ಕೊರತೆಯಿಂದ ಈ ರೀತಿಯ ಘಟನೆ ನಡೆದಿದೆ ಸರಿ ಆದರೆ ಇವರಿಗೆ ಸೂಚನೆ ನೀಡಿದ್ದ ಅಧಿಕಾರಿಗಳ ತಲೆದಂಡ ಯಾಕೆ ಆಗಿಲ್ಲ ಎಂಬುದು ಪ್ರಶ್ನೆ.
ಇನ್ನು ಬ್ರಾಹ್ಮಣ ಮಹಾಸಭಾದ ಆರೋಪದಂತೆ ಇಲ್ಲಿ ಜನಿವಾರ ಕತ್ತರಿಸಿಲ್ಲ ಬದಲಾಗಿ ಜನಿವಾರವನ್ನು ವಿದ್ಯಾರ್ಥಿಯ ಕೈಯಿಂದಲೇ ತೆಗೆಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಸ್ಪಷ್ಟನೆ ನೀಡಿದ್ದಾರೆ. ಅದುವಲ್ಲದೇ ಈ ಪ್ರಕರಣದ ಕುರಿತು ಸೂಕ್ತ ತನಿಖೆಗೂ ಆದೇಶ ಮಾಡಲಾಗಿದೆ. ಸದ್ಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ಹೀಗಾಗಿಯೂ ಅನೇಕ ಸಂಘಟನೆಗಳು ಅಧಿಕಾರಿಗಳ ತಲೆದಂಡ ಆಗಲೇಬೇಕು ಎಂದು ಪ್ರತಿಭಟಿಸುತ್ತಿದ್ದಾರೆ.
ಜನಿವಾರ ತೆಗೆಸಿರುವ ಪ್ರಕರಣದಲ್ಲಿ ಇಬ್ಬರು ಹೋಂ ಗಾರ್ಡ್ಸ್ಗಳ ತಲೆದಂಡವಾಗಿರುವುದು ಮಾತ್ರ, ವಿಪರ್ಯಾಸ. ದಿನಗೂಲಿ ನೌಕರರಾಗಿ ದುಡಿಯುವ ಹೋಂಗಾರ್ಡ್ಸ್ಗಗಳ ಹೊಟ್ಟೆ ಮೇಲೆ ಹೊಡೆದಿರುವುದು ಎಷ್ಟು ಸರಿ ಎಂಬುದು ಸದ್ಯದ ಪ್ರಶ್ನೆಯಾಗಿದೆ.