ಸಿಂಗಪೂರ : ಶಾಲಾ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಒಳಗೆ ಸಿಲುಕಿದ್ದವರ ರಕ್ಷಣೆಗೆ ನೆರವಾಗಿದ್ದ ಭಾರತ ಮೂಲದ ನಾಲ್ವರು ವಲಸೆ ಕಾರ್ಮಿಕರನ್ನು ಸಿಂಗಪೂರ ಸರ್ಕಾರ ಗೌರವಿಸಿದೆ.
ಕೇಂದ್ರ ಸಿಂಗಾಪುರದಲ್ಲಿರುವ ಕಟ್ಟಡದಲ್ಲಿರುವ ಅಡುಗೆ ಕಲಿಸುವ ಶಾಲೆಯಲ್ಲಿ ಏಪ್ರಿಲ್ 8ರಂದು ಈ ಅವಘಡ ಸಂಭವಿಸಿತ್ತು. ಈ ಅಗ್ನಿ ಅವಘಡದಲ್ಲಿ 16 ಮಕ್ಕಳು ಹಾಗೂ ನಾಲ್ವರು ಯುವಕರು ಒಳಗೆ ಸಿಲುಕಿದ್ದರು.
ಮಕ್ಕಳ ಚೀರಾಟ ಹಾಗೂ ಕಟ್ಟಡದ ಮೂರನೇ ಮಹಡಿಯಲ್ಲಿ ದಟ್ಟ ಹೊಗೆ ಆವರಿಸಿರುವುದನ್ನು ಗಮನಿಸಿದ ಭಾರತ ಮೂಲಕ ಇಂದ್ರಜಿತ್ ಸಿಂಗ್, ಸುಬ್ರಮಣಿಯನ್ ಶರಣ್‌ರಾಜ್, ನಾಗರಾಜನ್ ಅಂಬರಾಸನ್ ಮತ್ತು ಶಿವಾಮಿ ವಿಜಯರಾಜ್ ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದರು.
ಇದನ್ನೂ ಓದಿ :ಇಂದಿನಿಂದ ರಾಜ್ಯದಲ್ಲಿ ಒಂದು ವಾರಗಳ ಕಾಲ ಭಾರಿ ಮಳೆ ಮುನ್ಸೂಚನೆ
ಸಿಂಗಾಪುರ ನಾಗರಿಕ ರಕ್ಷಣಾ ಪಡೆ (ಎಸ್‌ಸಿಡಿಎಫ್) ಸಿಬ್ಬಂದಿ ಸ್ಥಳಕ್ಕೆ ಬರುವ ಮುನ್ನ, 10 ಮಕ್ಕಳನ್ನು ಕಾಪಾಡಿದ್ದರು. ಇದಕ್ಕಾಗಿ ಅವರಿಗೆ, ವಲಸೆ ಕಾರ್ಮಿಕಕರ ಯೋಗಕ್ಷೇಮ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುವ ಮಾನವಸಂಪನ್ಮೂಲ ಸಚಿವಾಲಯದ ‘ಭರವಸೆ, ರಕ್ಷಣೆ ಮತ್ತು ಒಪ್ಪಂದ’ (ಎಸಿಇ) ಗುಂಪು, ‘ಫ್ರೆಂಡ್ಸ್ ಆಫ್ ಎಸಿಇ’ ನಾಣ್ಯಗಳನ್ನು ನೀಡಿ ಗೌರವಿಸಿದೆ.
ಅವರ ತ್ವರಿತ ಚಿಂತನೆ ಹಾಗೂ ಶೌರ್ಯವು, ನೆರವಾಯಿತು. ಅಗತ್ಯ ಸಮಯದಲ್ಲಿ ಸಮುದಾಯದ ಶಕ್ತಿಯನ್ನು ತೋರಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು’ ಎಂದು ಸಚಿವಾಲಯ ಹೇಳಿದೆ. ಅವಘಡದ ವೇಳೆ, ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ 8 ವರ್ಷದ ಮಗ ಮಾರ್ಕ್ ಶಂಕರ್ ಪವನೋವಿಚ್ ಅವರನ್ನೂ ರಕ್ಷಿಸಲಾಗಿದೆ. ದುರಂತದ ವೇಳೆ ರಕ್ಷಿಸಲಾಗಿದ್ದ, ಆಸ್ಟ್ರೇಲಿಯಾ ಮೂಲದ 10 ವರ್ಷದ ಬಾಲಕಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.