ಹಾರರ್ ಕಥೆ ಇರುವ ತೆಲುಗಿನ ‘ಓದೆಲ 2’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ನಟಿ ತಮನ್ನಾ ಭಾಟಿಯಾ ಹಾಗೂ ನಟ ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ಅದ್ದೂರಿಯಾಗಿ ಈ ಸಿನಿಮಾ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿಸು ಸಿಕ್ಕಿದ್ದು. ಅಚ್ಚರಿ ಮೂಡಿಸುವ ಗ್ರಾಫಿಕ್ಸ್, ಅದ್ದೂರಿ ಮೇಕಿಂಗ್ನ ಝಲಕ್ ಈ ಟ್ರೇಲರ್ನಲ್ಲಿ ಕಾಣಿಸಿದೆ. ತಮನ್ನಾ ಭಾಟಿಯಾ ಮತ್ತು ವಸಿಷ್ಠ ಸಿಂಹ ಈ ಸಿನಿಮಾದಲ್ಲಿ ಮುಖಾಮಖಿ ಆಗುತ್ತಿದ್ದಾರೆ. ಚಿತ್ರಮಂದಿರದಲ್ಲಿ ಹಾರರ್ ಪ್ರಿಯರಿಗೆ ಭರ್ಜರಿ ಮನರಂಜನೆ ಸಿಗುವ ಲಕ್ಷಣ ಕಾಣಿಸಿದೆ.
ಅಶೋಕ್ ತೇಜ ಅವರು ‘ಓದೆಲ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸಂಪತ್ ನಂದಿ ಕತೆ ಬರೆದಿದ್ದಾರೆ. ಪಾತ್ರವರ್ಗದಲ್ಲಿ ತಮನ್ನಾ ಭಾಟಿಯಾ, ವಸಿಷ್ಠ ಸಿಂಹ ಜೊತೆ ಕನ್ನಡದ ನಟ ಶರತ್ ಲೋಹಿತಾಶ್ವ ಕೂಡ ಇದ್ದಾರೆ. ‘ಅಧ್ಯಕ್ಷ’ ಸಿನಿಮಾ ನಟಿ ಹಿಭಾ ಪಟೇಲ್ ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ‘ಓದೆಲ 2’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಸೌಂಡ್ ಮಾಡುತ್ತಿದೆ.
ಇದನ್ನೂ ಓದಿ :ಇವಿಎಂ ದುರ್ಬಳಕೆಯಿಂದ ಬಿಜೆಪಿ ಗೆಲ್ಲುತ್ತಿದೆ; ಯುವಕರು ಬ್ಯಾಲೆಟ್ ಪೇಪರ್ಗಾಗಿ ಒತ್ತಾಯಿಸಬೇಕು: ಖರ್ಗೆ
ತಮನ್ನಾ ಭಾಟಿಯಾ ಅವರು ಈವರೆಗೂ ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ ‘ಓದೆಲ 2’ ಸಿನಿಮಾದಲ್ಲಿ ಅವರಿಗೆ ಬೇರೆ ರೀತಿಯ ಪಾತ್ರವಿದೆ. ದುಷ್ಟಶಕ್ತಿಯ ವಿರುದ್ಧ ಹೋರಾಡುವ ಶಿವ ಶಕ್ತಿ ಎಂಬ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಅವರಿಗೆ ಸವಾಲು ಹಾಕುವ ದುಷ್ಟಶಕ್ತಿಯಾಗಿ ವಸಿಷ್ಠ ಸಿಂಹ ಅವರು ನಟಿಸಿದ್ದಾರೆ. ತಮನ್ನಾ ಭಾಟಿಯಾ ಅವರ ನಾಗ ಸಾಧು ಗೆಟಪ್ ಪ್ರೇಕ್ಷಕರ ಗಮನ ಸೆಳೆದಿದೆ. ಈ ಟ್ರೇಲರ್ಗೆ ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ.
ಏಪ್ರಿಲ್ 11ರಂದು ‘ಓದೆಲ 2’ ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡದ ಪ್ರತಿಭಾವಂತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಟ್ರೇಲರ್ನಲ್ಲಿ ಹಿನ್ನೆಲೆ ಸಂಗೀತಕ್ಕೆ ಜನರು ಫಿದಾ ಆಗಿದ್ದಾರೆ. ಅಜ್ಜು ಮ್ಯೂಸಿಕ್ ಈ ಸಿನಿಮಾಗೆ ಹೈಲೆಟ್ ಅಂದ್ರೇ ತಪ್ಪಾಗೋದಿಲ್ಲ. 2022ರಲ್ಲಿ ವಸಿಷ್ಠ ಸಿಂಹ ನಟಿಸಿದ ‘ಓದೆಲ ರೈಲ್ವೇ ಸ್ಟೇಷನ್’ ಸಿನಿಮಾ ಹಿಟ್ ಆಗಿತ್ತು. ಅದರ ಸೀಕ್ವೆಲ್ ಆಗಿ ‘ಓದೆಲ 2’ ಸಿನಿಮಾ ಮೂಡಿಬಂದಿದೆ. ಈ ಬಾರಿ ಪಾತ್ರವರ್ಗಕ್ಕೆ ತಮನ್ನಾ ಭಾಟಿಯಾ ಎಂಟ್ರಿ ನೀಡಿದ್ದಾರೆ.
ಭೂತ ಪ್ರೇತದ ಕಥೆಗೆ ಬೇಕಾದ ಫೀಲ್ ಚಿತ್ರದಲ್ಲಿದೆ. ಸೌಂದರ್ಯ ರಾಜನ್ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಓದೆಲಾ ಎಂಬ ಊರಿನಲ್ಲಿ ಮತ್ತೆ ಪ್ರೇತಾತ್ಮಗಳ ಹಾವಳಿ ಶುರುವಾಗಿದ್ದು ಅದನ್ನು ಪರಿಹರಿಸಲು ಶಿವಶಕ್ತಿ ಅಲ್ಲಿಗೆ ಬರುತ್ತಾಳೆ. ಮುಂದೇನು ಏನೆಲ್ಲಾ ಆಗುತ್ತದೆ ಎನ್ನುವುದೇ ಸಿನಿಮಾ ಕಥೆ ಎಂದು ಟ್ರೈಲರ್ ನೋಡಿದರೆ ಅರ್ಥವಾಗುತ್ತದೆ. ಅಂದಾಜು 25 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ ಎನ್ನಲಾಗ್ತಿದೆ.