ಕಲಬುರಗಿ : ಮನೆ ಬಾಡಿಗೆ ಕಟ್ಟಲು ಗಂಡನ ಬಳಿ ಹಣ ಕೇಳಿದ್ದಕ್ಕೆ ಸಿಟ್ಟಿಗೆದ್ದ ಗಂಡ, ಹೆಂಡತಿಯನ್ನು ಹೊಡೆದು ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು. ಕೊಲೆಯಾದ ದುರ್ದೈವಿಯನ್ನು 35 ವರ್ಷದ ಸುಜಾತಾ ತಳವಾರ ಎಂದು ಗುರುತಿಸಲಾಗಿದೆ.
ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ನಿಪ್ಪಾಣಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಮೃತ ಸುಜಾತಾ ತಳವಾರ (35) ಮತ್ತು ಸಿದ್ದರಾಮ ತಳವಾರ ಕೆಲ ವರ್ಷಗಳ ಹಿಂದೆ ಮದುವೆಯಾಗಿ ಜೀವನ ಸಾಗಿಸುತ್ತಿದ್ದರು. ಲಾರಿ ಡ್ರೈವರ್ ಆಗಿದ್ದ ಸಿದ್ದರಾಮ 15 ದಿನಗಳಿಗೊಮ್ಮೆ ಮನೆಗೆ ಬರುತ್ತಿದ್ದ. ಹೀಗೆ ಮನೆಗೆ ಬಂದ ಗಂಡನ ಬಳಿ ಹೆಂಡತಿ ಸುಜಾತ ಮನೆ ಬಾಡಿಗೆ ಕಟ್ಟಲು ಹಣ ಕೇಳಿದ್ದಾಳೆ.
ಇದನ್ನೂ ಓದಿ :ಮುಸ್ಲಿಂ ಬಾಹುಳ್ಯವುಳ್ಳ ಪೊಲೀಸ್ ಠಾಣೆಯಲ್ಲಿ RSSನ ವ್ಯಕ್ತಿಯನ್ನು ಏಕೆ ಇಡಬೇಕಿತ್ತು: ಕೆ.ಎನ್ ರಾಜಣ್ಣ
ಇದರಿಂದ ರೊಚ್ಚಿಗೆದ್ದ ಪಾಪಿ ಗಂಡ ಹೆಂಡತಿಗೆ ಹಿಗ್ಗಾಮುಗ್ಗ ಥಳಿಸಿ, ಕೊಲೆ ಮಾಡಿದ್ದಾನೆ. ನಂತರ ಆಕೆಯೆ ನೇಣು ಹಾಕಿಕೊಂಡಿರುವಂತೆ ಬಿಂಬಿಸಲು ಯತ್ನಿಸಿದ್ದಾನೆ ಎಂದು ಮೃತ ಸುಜಾತ ಕುಟುಂಬಸ್ಥರು ಆರೋಪಿಸಿದ್ದಾರೆ. ಕೊಲೆ ಮಾಡಿದ ನಂತರ ಆರೋಪಿ ಸಿದ್ದರಾಮ ಸ್ಥಳದಿಂದ ಪರಾರಿಯಾಗಿದ್ದು. ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.