ಅತೀ ಕಡಿಮೆ ಅವಧಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಕೆವಿಎನ್ ಸಂಸ್ಥೆ ಸೃಷ್ಟಿಸಿರುವ ಮೈಲಿಗಲ್ಲು ಸಾಕಷ್ಟಿವೆ. ಕನ್ನಡದ ಸಂಸ್ಥೆಯೊಂದು ಈಗ ಜಾಗತಿಕ ಮಟ್ಟದಲ್ಲಿ ತನ್ನ ಅಸ್ಥಿತ್ವ ಸ್ಥಾಪಿಸುತ್ತಿದೆ. ಇದರ ಹಿಂದಿರುವ ಪ್ರೇರಕ ಶಕ್ತಿ ವೆಂಕಟ್ ಕೆ ನಾರಾಯಣ್. ರಿಯಲ್ ಎಸ್ಟೇಟ್ ಉದ್ಯಮದಿಂದ ಚಿತ್ರರಂಗಕ್ಕೆ ಕಾಲಿಟ್ಟಿರುವ ವೆಂಕಟ್ ಕೆ ನಾರಾಯಣ್ ದಳಪತಿ ವಿಜಯ್ ಅವರ 69ನೇ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.
ವೆಂಕಟ್ ಕೆ ನಾರಾಯಣ್ ಅವರು ಕೆವಿಎನ್ ಪ್ರೊಡಕ್ಷನ್ ಮೂಲಕ ದಳಪತಿ ವಿಜಯ್ ಅವರಿಗಾಗಿ ನಿರ್ಮಿಸುತ್ತಿರುವ ಚಿತ್ರದ ಶೀರ್ಷಿಕೆ ಅನಾವರಣ ಮತ್ತು ಫಸ್ಟ್ ಲುಕ್ ಪೋಸ್ಟರ್ ಇದೀಗ ಹೊರಬಂದಿದೆ.
ಹಿಂದೆ ನಿಂತ ಅಗಣಿತ ಜನಸಾಗರದ ಮುಂದೆ ವಿಜಯ್ ಅವರು ಸೊಂಟದ ಮೇಲೆ ಕೈಯಿಟ್ಟುಕೊಂಡು ನಿಂತು ಸೆಲ್ಫೀ ತೆಗೆದುಕೊಳ್ಳುತ್ತಿರುವ ಫೋಟೋವನ್ನು ಈ ಪೋಸ್ಟರಿನಲ್ಲಿ ಬಳಸಲಾಗಿದೆ. ʻಜನ ನಾಯಗನ್ʼ ಎನ್ನುವ ಶೀರ್ಷಿಕೆಯನ್ನು ಈ ಚಿತ್ರಕ್ಕಿಡಲಾಗಿದೆ. ಸದ್ಯ ತಮಿಳುನಾಡು ರಾಜಕಾರಣದಲ್ಲಿ ದಳಪತಿ ವಿಜಯ್ ರಾಜಕಾರಣದಲ್ಲಿ ಹೊಸ ಇತಿಹಾಸ ಬರೆಯಲು ಹೊರಟಿದ್ದಾರೆ. ಇದೇ ಸಂದರ್ಭದಲ್ಲಿ ಜನರ ನಡುವೆ ನಿಂತಿರುವ ಫೋಟೋ ಮತ್ತು ʻಜನ ನಾಯಗನ್ʼ ಎನ್ನುವ ಟೈಟಲ್ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಇದನ್ನೂ ಓದಿ :ಥೈಲ್ಯಾಂಡ್ ಯುವತಿಯನ್ನು ಕರೆತಂದು ಹೈಟೆಕ್ ವೇಶ್ಯಾವಾಟಿಕೆ : ಪೊಲೀಸರ ಬಳಿ ‘ಬಿಸಿನೆಸ್’ ಎಂದ ಯುವತಿ !
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ʻಜನ ನಾಯಗನ್ʼ ಚಿತ್ರದ ಶೀರ್ಷಿಕೆ ಕುರಿತಾಗಿಯೇ ಹೆಚ್ಚು ಚರ್ಚೆಯಾಗುತ್ತಿದೆ. ಪೋಸ್ಟರ್ ಅಂತೂ ಎಲ್ಲೆಡೆ ವೈರಲ್ ಆಗಿದೆ.
ತಮಿಳಿನ ಖ್ಯಾತ ನಿರ್ದೇಶಕ ಹೆಚ್. ವಿನೋದ್ ನಿರ್ದೇಶಿಸುತ್ತಿರುವ ʻಜನ ನಾಯಗನ್ʼ ಚಿತ್ರಕ್ಕೆ ಮ್ಯೂಸಿಕ್ ಮಾಂತ್ರಿಕ ಅನಿರುದ್ಧ್ ಸಂಗೀತ ಸಂಯೋಜಿಸಿದ್ದಾರೆ. ಸತ್ಯನ್ ಸೂರ್ಯನ್ ಛಾಯಾಗ್ರಹಣ, ಅನಲ್ ಅರಸು ಸಾಹಸ, ವಿ. ಸೆಲ್ವಕುಮಾರ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಜಗದೀಶ್ ಪಳನಿಸಾಮಿ, ಲೋಹಿತ್ ಎನ್.ಕೆ. ಇಬ್ಬರೂ ಸಹ ನಿರ್ಮಾಪಕರಾಗಿದ್ದಾರೆ.
ಸದ್ಯ ಕರ್ನಾಟದ ಕಲಾವಿದರು ಇಡೀ ಭಾರತೀಯ ಚಿತ್ರರಂಗದಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಂತಿದ್ದಾರೆ. ನಮ್ಮ ನೆಲದ ನಿರ್ಮಾಪಕರು ಬಹುಕೋಟಿ ವೆಚ್ಚದಲ್ಲಿ ಸೂಪರ್ ಸ್ಟಾರ್ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ವೆಂಕಟ್ ಕೆ ನಾರಾಯಣ್ ಅವರ ನಿರ್ಮಾಣದಲ್ಲಿ ʻಜನ ನಾಯಗನ್ʼ ಈಗ ಇಷ್ಟು ದೊಡ್ಡ ಕ್ರೇಜ್ ಹುಟ್ಟು ಹಾಕಿದೆ. ಫಸ್ಟ್ ಲುಕ್ ಪೋಸ್ಟರ್ ಮೂಲಕವೇ ಈ ಮಟ್ಟಿಗಿನ ಹವಾ ಸೃಷ್ಟಿಸಿರುವ ʻಜನ ನಾಯಗನ್ʼ ಬಿಡುಗಡೆ ಹೊತ್ತಿಗೆ ಇನ್ನೂ ಸಾಕಷ್ಟು ರೀತಿಯಲ್ಲಿ ಸೌಂಡ್ ಮಾಡೋದು ಖಚಿತ.