ಬೀದರ್ : ಮಕ್ಕಳು ಬೇಕು ಅಂತಾ ಅದೆಷ್ಟೊ ಜನರು ಕಂಡಕಂಡ ದೇವರಿಗೆಲ್ಲಾ ಹರಕೆ ಹೊರುತ್ತಾರೆ. ಆದ್ರೆ, ಇಲ್ಲೊಬ್ಬ ತಾಯಿ ಮನುಷ್ಯತ್ವವನ್ನೇ ಮರೆತು, ತನ್ನ ಕರುಳಬಳ್ಳಿಯನ್ನೇ ನಡು ಬೀದಿಯಲ್ಲಿ ಬಿಟ್ಟು ಹೋಗಿದ್ದಾಳೆ. ಹಸುಗೂಸನ್ನು ಬೀದಿಯಲ್ಲಿಟ್ಟು ಹೋದ ಪರಿಣಾಮ ಜಗತ್ತು ನೋಡುವ ಮೊದಲೇ ಆ ಬಡ ಜೀವ ಕಣ್ಮುಚ್ಚಿದೆ.
ಜನವರಿ 6ರಂದು ಮಧ್ಯರಾತ್ರಿ 1.25ರ ಸುಮಾರಿಗೆ ಮಹಿಳೆಯೊಬ್ಬಳು ಹಸುಗೂಸನ್ನ ಚೀಲದಲ್ಲಿ ಹಾಕಿಕೊಂಡು ಬಂದು ಬೀದಿಯಲ್ಲಿ ಬಿಟ್ಟು ಹೋಗಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳಿಗ್ಗೆ ಗ್ರಾಮಸ್ಥರು ಚೀಲದಲ್ಲಿರುವ ಹಸುಗೂಸನ್ನ ಕಂಡು ಗಾಬರಿಯಾಗಿದ್ದಾರೆ. ಈ ಕುರಿತು ಧನ್ನೂರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ದೌಡಾಯಿಸಿ ಪರಿಶೀಲಿಸಿ ಹಸುಗೂಸನ್ನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮಗು ಜೀವ ಬಿಟ್ಟಿದೆ. ಇನ್ನು ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸರು ಮಹಿಳೆಯ ಗುರುತು ಪತ್ತೆ ಮಾಡಿದ್ದು, ಅದೇ ಗ್ರಾಮದ ಮಹಿಳೆ ಅಂತಾ ತಿಳಿದು ಬಂದಿದ್ದು ಮಹಿಳೆಯ ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ನವಜಾತ ಶಿಶುವನ್ನು ಚರಂಡಿಗೆ ಎಸೆದ ತಾಯಿ : ಕೊರೆವ ಚಳಿಯಲ್ಲಿ ರಾತ್ರಿ ಕಳೆದ ಮಗು !
ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿಗೆ ಕಣ್ತೆರೆಯುವ ಮುನ್ನವೇ ಪುಟ್ಟ ಕಂದಮ್ಮ ಕಣ್ಮುಚ್ಚುವಂತಾಗಿದೆ. ಮಕ್ಕಳಿಲ್ಲಾ ಅಂತಾ ಕೊರಗುವವರ ನಡುವೆ ಮಕ್ಕಳಾದ್ರೂ ಈ ರೀತಿ ನಡುಬೀದಿಯಲ್ಲಿ ಬಿಟ್ಟು ಹೋಗಿದ್ದಕ್ಕೆ ಗ್ರಾಮಸ್ಥರು ಮಮ್ಮಲ ಮರಗುತ್ತಿದ್ದಾರೆ.